ಬೆಂಗಳೂರು: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಎರಡನೇ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಎರಡಂಕಿ ಮೊತ್ತ ಕಲೆಹಾಕುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್ಗಳನ್ನು ಕಳೆದುಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.ನಾಯಕ ರೋಹಿತ್ ಶರ್ಮಾ ಕೇವಲ 2 ರನ್ಗಳಿಸಿ ಟಿಮ್ ಸೌಥಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (0) ಕೂಡ ಶೂನ್ಯದೊಂದಿಗೆ ಪೆವಿಲಿಯನ್ಗೆ ಹಿಂತಿರುಗಿದರು. ಇನ್ನು ಶುಭ್ಮನ್ ಗಿಲ್ ಬದಲಿಯಾಗಿ ತಂಡದಲ್ಲಿ ಅವಕಾಶ ಪಡೆದ ಸರ್ಫರಾಝ್ ಖಾನ್ (0) ಕೂಡ ಸೊನ್ನೆ ಸುತ್ತುವ ಮೂಲಕ ನಿರಾಸೆ ಮೂಡಿಸಿದರು.
ಅಂದರೆ ಭಾರತ ತಂಡವು ಕೇವಲ 13 ರನ್ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ.ಈ ಮೂವರಲ್ಲಿ ಇಬ್ಬರು ಡಕ್ ಔಟ್ ಆಗಿರುವುದು ವಿಶೇಷ. ಇನ್ನು 12 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 13 ರನ್ ಕಲೆಹಾಕಿದ್ದು, ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ (8) ಹಾಗೂ ರಿಷಭ್ ಪಂತ್ (3) ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಮಳೆ ತುಂತುರು ಹನಿ ಬೀಳಲು ಶುರುವಾದ ಹಿನ್ನೆಲೆ ಆಟವನ್ನು ಕೆಲ ಕಾಲ ಸ್ಥಗಿತಗೊಳಿಸಿ, ಮಳೆ ನಿಂತ ನಂತರ ಮತ್ತೆ ಆರಂಭಿಸಲಾಯಿತು.