ದೊಡ್ಡಬಳ್ಳಾಪುರ : ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುತ್ತದೆ ಎಂದು ವಿದ್ಯಾರ್ಥಿ ನಿಲಯದ ನಿಲಯದ ಮುಖ್ಯಸ್ಥೆ ಅವರು ರಾಧಾಮಣಿ ಅಭಿಪ್ರಾಯ ಪಟ್ಟರು.
ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವುದಲ್ಲದೆ, ತಮ್ಮಲ್ಲಿ ಅಡಗಿರುವ ಸಾಮರ್ಥ್ಯವನ್ನು ತೋರಿಸಲು ಸೂಕ್ತ ವೇದಿಕೆಯಾಗುತ್ತದೆ. ಆಟದಲ್ಲಿ ಸೋಲು ಗೆಲುವುಗಳು ಸಾಮಾನ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಆಗ ಮಾತ್ರ ಅವರು ಮುಂದೆ ಜಯಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಓಬಳೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಯಮ ಕಲಿಯಬಹುದು ಎಂದರು.ನಿಲಯದ ಜಿ.ಸಿ.ಮುನಿಕೃಷ್ಣ ಮಾತಾನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ತುಂಬಿಸಿ, ನಾಯಕತ್ವ ಗುಣವನ್ನು ಬೆಳೆಸುತ್ತದೆ ಮತ್ತು ಮನಸ್ಸಿಗೆ ಮನರಂಜನೆಯನ್ನು ನೀಡುತ್ತದೆ ಎಂದರು.
ಪಂದ್ಯದಲ್ಲಿ “ಸ್ಟಾರ್ ಬಾಯ್ಸ್” ತಂಡವು ವಿಜೇತವಾಯಿತು ಮತ್ತು “ಹಂಟರ್ಸ್” ತಂಡ ರನ್ನರ್ ಆಫ್ ಆಯಿತು. ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಹೇಮಂತ್ ಮತ್ತು ಶಶಿಕಿರಣ್ ಹೊರಹೊಮ್ಮಿದರೆ, ಅತ್ಯುತ್ತಮ ಬೌಲರ್ ಆಗಿ ಪವನ್ ಪ್ರಶಸ್ತಿಯನ್ನು ಪಡೆದರು.ಈ ಸಂದರ್ಭದಲ್ಲಿ ಇಲಾಖೆಯ ಸಂದೀಪ್, ಶಾಂತಮ್ಮ, ಮುನಿ ರತ್ನಮ, ಮಂಜಮ್ಮ, ನೇತ್ರಾ, ಚಂದ್ರು ಮುಂತಾದವರು ಉಪಸ್ಥಿತರಿದ್ದರು.