ಬೆಂಗಳೂರು: ಏಯ್ ಹೋಗೋ ಎಂದಿದ್ದಕ್ಕೆ ವಿಶೇಷ ಚೇತನ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೃತ್ಯ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿ ನಡೆದಿದೆ.
ಹಲ್ಲೆಗೊಳಗಾಗಿರುವ ಜಿಗಣಿಯ ವಾಬಸಂದ್ರ ನಾಗರಾಜ್(26)ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಾಸಾಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್ ಏಯ್ ಹೋಗ್ರೋ? ಎಂದಿದ್ದಾರೆ.
ಇದರಿಂದ ಆಕ್ರೋಶಗೊಂಡು ನಾಗರಾಜ್ನನ್ನು ಹಿಂಬಾಲಿಸಿದ್ದ ಆರೋಪಿಗಳು,ಆತನ ಮನೆ ಬಳಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಮುಖ, ಕೈ, ಕುತ್ತಿಗೆಗೆ ಲಾಂಗ್, ಮಚ್ಚುಗಳಿಂದ ಯದ್ವಾತದ್ವಾ ಕೊಚ್ಚಿ ಹಾಕಿ, ಹಲ್ಲೆ ಬಳಿಕ ಆಟೋ ಸಮೇತ ಪರಾರಿಯಾಗಿದ್ದಾರೆ.ರೌಡಿ ಶೀಟರ್ಗಳಾದ ಮೇಲುಕೋಟೆ ಮೂಲದ ಸೂರ್ಯ, ಯಾರಂಡಹಳ್ಳಿ ವಾಸಿ ಪ್ರವೀಣ್ ಮತ್ತು ಇತರರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.