ಬೆಂಗಳೂರು: ವಕ್ಫ್ ಭೂ ವಿವಾದ ಬೆನ್ನಲ್ಲೇ ಮತ್ತೊಂದು ವಿವಾದ ಉದ್ಭವಿಸುವ ಸಾಧ್ಯತೆ ಇದೆ. ಮುಸ್ಲಿಮರ ಖಬರಸ್ತಾನಗಳಿಗೆ ಸರ್ಕಾರಿ, ಕಂದಾಯ ಭೂಮಿ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಈ ಸಂಬಂಧ ಪರ-ವಿರೋಧ ಚರ್ಚೆ ಶುರುವಾಗಿದೆ. ಈಗಾಗಲೇ ವಕ್ಫ್ ವಿಚಾರವಾಗಿ ದೊಡ್ಡ ಕದನವೇ ರಾಜ್ಯದಲ್ಲಿ ನಡೆಯುತ್ತಿದ್ದು, ಈಗ ಹೊಸದೊಂದು ವಿವಾದ ತಲೆದೋರಿದೆ.
ರಾಜ್ಯದ ೩೨೮ ಖಬರಸ್ತಾನಗಳಿಗೆ ಸರ್ಕಾರಿ ಭೂಮಿ ನೀಡುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರಿ
ಜಮೀನನ್ನು ಮಂಜುರಾತಿ ನೀಡಲು ಸರ್ಕಾರ ಮುಂದಾಗಿದೆ. ಸುಮಾರು ೨೭೫೦ ಎಕರೆ ಭೂಮಿ ಮಂಜುರಾತಿ ನೀಡಲು ತಯಾರಿ ನಡೆಸಿದ್ದು, ಸರ್ಕಾರಿ ಭೂಮಿಯನ್ನು ಖಬರಸ್ತಾನವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು, ರಾಯಚೂರು, ಕಲಬುರಗಿ, ಹಾಸನ, ದಕ್ಷಿಣಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ವಕ್ಫ್ ಅಧೀನದ ಮಸೀದಿ, ಪ್ರಾರ್ಥನಾ ಮಂದಿರದ ಅಧೀನದಲ್ಲಿರುವ ಖಬರಸ್ತಾನಗಳಿಗೆ ಜಮೀನು ನೀಡಲಾಗುತ್ತಿದೆ.
ಈ ಬಗ್ಗೆ ಈ ಹಿಂದೆಯೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದರು. ಕಳೆದ ಎಪ್ರಿಲ್ ೧೬ರಂದು ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ , ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಗೆ ಸೂಚನೆ ನೀಡಿದ್ದರು.