ಬೆಂಗಳೂರು: ಆಸ್ತಿ ಖಾತಾ ಹೊಂದಿಲ್ಲದ ಆಸ್ತಿದಾರರಿಗೆ ಹೊಸ ಖಾತಾ ಮಾಡಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿದ್ದು, ಇದಕ್ಕಾಗಿ ಹೊಸ ವೆಬ್ ಸೈಟ್’ವೊಂದನ್ನು ಬಿಡುಗಡೆ ಮಾಡಿದೆ.
ಬಿಬಿಎಂಪಿ ಖಾತಾ ಹೊಂದಿರದ 5 ಲಕ್ಷ ಆಸ್ತಿಗಳಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಪಾಲಿಕೆ, ಹೊಸ ಖಾತಾ ಮಾಡಿಸೋರಿಗೆ ಅವಕಾಶ ಕೊಟ್ಟಿದ್ದು, https://bbmp.karnataka.gov.in/newkhata ವೆಬ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ
ಬಿಬಿಎಂಪಿ ಮಿತಿಯಲ್ಲಿರುವ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಸ್ತಿ ಮಾಲೀಕರು ಖಾತೆಯನ್ನು ಹೊಂದಿಲ್ಲ. ಹೀಗಾಗಿ ಅವರನ್ನು ತೆರಿಗೆ ವ್ಯಾಪ್ತಿಗೆ ತರಲು ಮತ್ತು ಆಸ್ತಿ ತೆರಿಗೆಯ ಮೂಲಕ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಪಾಲಿಕೆ ಹೊಂದಿದೆ.
ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು, ನಗರದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಸ್ತಿ ಮಾಲೀಕರು ಬಿಬಿಎಂಪಿಯಿಂದ ಖಾತಾ ಹೊಂದಿಲ್ಲ. ಕೈಬರಹದ ಖಾತಾವನ್ನೂ ಹೊಂದಿಲ್ಲ. ಖಾತಾ ಇಲ್ಲದೆಯೇ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಈ ಸ್ವತ್ತುಗಳಿಗೆ ಸಂಬಂಧಿಸಿದ ವಹಿವಾಟು ನಡೆಸುತ್ತಿದ್ದು, ಆಸ್ತಿ ತೆರಿಗೆ ವ್ಯಾಪ್ತಿಯಿಂದಲೂ ಹೊರಗುಳಿದಿವೆ. ಎಲ್ಲ ಆಸ್ತಿಗಳಿಗೂ ಖಾತಾ ನೀಡಬೇಕು. ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚಿಸಿದ್ದಾರೆ. ಅದರಂತೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಮಾಲೀಕರು ಹೊಸದಾಗಿ ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ್ ಸಂಖ್ಯೆ, ಮಾರಾಟ/ನೋಂದಣಿ ಪತ್ರದ ಸಂಖ್ಯೆ, ಆಸ್ತಿ ಚಿತ್ರ, ಮಾರಾಟ/ ನೋಂದಣಿ ಪತ್ರಕ್ಕೆ ಕನಿಷ್ಠ ಒಂದು ದಿನ ಮೊದಲಿನಿಂದ ಆಸ್ತಿಯ 2024ರ ಅಕ್ಟೋಬರ್ 31ರವರೆಗಿನ ಅವಧಿಯ ಋಣಭಾರ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಹೊಸದಾಗಿ ಖಾತಾವನ್ನು ಪಡೆಯುವ ಪ್ರಕ್ರಿಯೆ ಕುರಿತು ಬಿಬಿಎಂಪಿ ವಿಡಿಯೊ (https://youtu.be/FRLimLizeHM?si=BxG9mgRWBU7RkP3B) ಮೂಲಕ ವಿವರಣೆ ನೀಡಿದೆ ಎಂದು ತಿಳಿಸಿದರು.
ಬಿಬಿಎಂಪಿಯಿಂದ ಕೈಬರಹ ಅಥವಾ ಇ– ಖಾತಾ ಹೊಂದಿದ್ದರೆ ಮತ್ತೆ ಹೊಸ ಖಾತಾ ಪಡೆಯಲು ಪ್ರಯತ್ನಿಸಬಾರದು. ಇಂತಹ ಪ್ರಯತ್ನಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಲ್ಲಿಸಬೇಕಾದ ದಾಖಲೆಗಳು…
- ಮಾರಾಟ/ನೋಂದಣಿ ಪತ್ರ
- ಆಧಾರ್ ಕಾರ್ಡ್
- ಇಸಿ ಪ್ರಮಾಣ ಪತ್ರ
- ಆಸ್ತಿ ಫೋಟೊ
- ಬೆಸ್ಕಾಂ ಐಡಿ