ಬೆಂಗಳೂರು: ಖಾಸಗಿ ಕಂಪನಿಯೊಂದರ ಮಾಹಿತಿಯ ಡೇಟಾವನ್ನು ಕಳವು ಮಾಡಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದ ಹೊರ ರಾಜ್ಯದ ನಾಲ್ವರು ಸೈಬರ್ ವಂಚಕರನ್ನು ಬಂಧಿಸಿರುವ ಪೂರ್ವ ವಿಭಾಗದ ಸಿಇಎನ್ ಪೊಲೀಸರು ರೂ. 1,83,48,500 ನಗದು, 2 ಮೊಬೈಲ್ ನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಡ್ರೀಮ್ ಪ್ಲಗ್ ಟೆಕ್ ಸೆಲ್ಯೂಶನ್ ಪ್ರೈಲಿ(ಕ್ರೆಡ್) ಕಂಪನಿಯ ನೋಡಲ್ ಮತ್ತು ಕರೆಂಟ್ ಬ್ಯಾಂಕ್ ಖಾತೆಗಳು, ಆಕ್ಸಿಸ್ ಬ್ಯಾಂಕ್ ಇಂದಿರಾನಗರ ಶಾಖೆಯಲ್ಲಿದ್ದು, ಈ ಖಾತೆಗಳಿಗೆ ಲಿಂಕ್ ಇರುವ ಈ ಮೇಲ್ ಮತ್ತು ಮೊಬೈಲ್ ನಂಬರ್ ಗಳನ್ನು ಪಡೆದ ಅಪರಿಚಿತರು ಡೇಟಾವನ್ನು ಕಳವು ಮಾಡಿದ್ದು, ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಫಾರ್ಮ್ ಮತ್ತು ಸಹಿ, ಸೀಲುಗಳನ್ನು ನಕಲು ಮಾಡಿ, ಕಂಪನಿಗೆ ಸಂಬಂಧಿಸಿದ 12,51,13,000 ಹಣವನ್ನು 17 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವ ಬಗ್ಗೆ ಕಂಪನಿಯ ನಿರ್ದೇಶಕರು ದೂರು ಸಲ್ಲಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡ ಪೊಲೀಸರು, ಗುಜರಾತ್ ರಾಜ್ಯದ ಸೂರತ್, ನವಸಾರಿ, ರಾಜ್ಕೋಟ್ನಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಕಳೆದ ಡಿ 20 ರಂದು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಸೈಬರ್ ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಗುಜರಾತ್ ರಾಜ್ಯದ ಅಕ್ಸಿಸ್ ಬ್ಯಾಂಕ್ನ ಕಾರ್ಪೋರೇಟ್ ವಿಭಾಗದ ಮ್ಯಾನೇಜರ್ ಆಗಿದ್ದು, ದೂರುದಾರ ಕಂಪನಿಯ ಖಾತೆಗಳ ಡೇಟಾವನ್ನು ಕಳವು ಮಾಡಿ, ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ನಕಲಿ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಫಾರ್ಮ್ ಹಾಗೂ ಕಂಪನಿಯ ಬೋರ್ಡ್ ರೆಜ್ಯೂಲ್ಯೂಶನ್ ದಾಖಲೆಗಳನ್ನು ಸೃಷ್ಠಿಸಿ, ಗುಜರಾತ್ ರಾಜ್ಯದ ಬರೂಚ್ ಜಿಲ್ಲೆಯ ಅಂಕಲೇಶ್ವರದ ಅಕ್ಸಿಸ್ ಬ್ಯಾಂಕ್ನಲ್ಲಿ ಸಲ್ಲಿಸಿ, ಅಲ್ಲಿಂದ ಪಿರ್ಯಾದುದಾರರ ಕಂಪನಿಯ ನೋಡಲ್ ಬ್ಯಾಂಕ್ ಖಾತೆಗಳ ಇಂಟರ್ನೆಟ್ ಬ್ಯಾಂಕಿಂಗ್ನ್ನು ವಶಕ್ಕೆ ತೆಗೆದುಕೊಂಡು ಆ ಮೂಲಕ ಗುಜರಾತ್ ಮತ್ತು ರಾಜಸ್ತಾನ ರಾಜ್ಯದ 17 ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 12. 50 ಕೋಟಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದನ್ನು ತನಿಖೆಯಿಂದ ಪತ್ತೆ ಹಚ್ಚಿದ್ದಾರೆ.
ಆರೋಪಿತರನ್ನು ಸುದೀರ್ಘ ವಿಚಾರಣೆ ನಡೆಸಿ 2 ಮೊಬೈಲ್ ಫೋನ್, ನಕಲಿ ಸಿಐಬಿ ಫಾರಂಗಳು ಹಾಗೂ 1,83,48,500 ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ.ದೇವರಾಜ್, ಸಿ.ಇ.ಎನ್ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ಕುಮಾರ್ ಮತ್ತವರ ಸಿಬ್ಬಂದಿ ಯಶಸ್ವಿಯಾಗಿ ಕೈಗೊಂಡಿದ್ದಾರೆ ಎಂದು ಹೇಳಿದರು.