ಮಧುಗಿರಿ: ವ್ಯಾಪಾರದ ಪೈಫೋಟಿಯಿಂದ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹತ್ತಿರದ ಪಾರ್ಕಿನ ಮುಂದೆ ವ್ಯಾಪಾರ ಮಾಡಿಕೊಳ್ಳಲು ಇಲ್ಲಿನ ಪುರಸಭೆ ಮತ್ತುಪೊಲೀಸ್ ಇಲಾಖಾ ವತಿಯಿಂದ ಅನುಮತಿ ನೀಡಲಾಯಿತು.
ಸುಮಾರು 3-4 ದಿನಗಳ ಹಿಂದೆ ಎರಡು ಹೋಟೆಲ್ ಮಾಲೀಕರುಗಳು ವ್ಯಾಪಾರದ ಪೈಪೋಟಿಯ ವಿಚಾರವಾಗಿ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದರು ಮತ್ತು ಈ ಪ್ರಕರಣವೂ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು. ಇದನ್ನು ತೀವ್ರವಾಗಿ ಪರಿಗಣಿಸಿದ ಪೊಲೀಸ್ ಮತ್ತು ಪುರಸಭೆಯವರು ಆ ಜಾಗದಲ್ಲಿ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿದ್ದರು.
ಇದರಿಂದ ತೊಂದರೆಗೊಳಗಾದ ಫುಟ್ಪಾತ್ ವ್ಯಾಪಾರಸ್ಥರು ವ್ಯಾಪಾರಕ್ಕೆ ಅವಕಾಶ ನೀಡುವಂತೆ ಪೊಲೀಸ್ ಇಲಾಖೆ ಮತ್ತು ಪುರಸಭೆಯವರಿಗೆ ಮನವಿ ಮಾಡಿದ್ದರು.
ವ್ಯಾಪಾರಸ್ಥರ ಮನವಿಗೆ ಸ್ಪಂದಿಸಿದ ಪೊಲೀಸ್ ಮತ್ತು ಪುರಸಭೆಯವರು ಅಲ್ಲಿನ ಎಲ್ಲಾ ವ್ಯಾಪಾರಸ್ಥರಿಗೆ ಸ್ಥಳ ನಿಗದಿ ಮಾಡಿ ಆಯಾ ಸ್ಥಳಗಳಲ್ಲಿ ವ್ಯಾಪಾರ ಮಾಡುವಂತೆ ಮೌಖಿಕ ಅನುಮತಿ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್ ವ್ಯಾಪಾರಸ್ಥರಾದ ನೀವುಗಳು ಪರಿಶುದ್ಧವಾದ ನೀರನ್ನು ಗ್ರಾಹಕರಿಗೆ ವಿತರಿಸಬೇಕು, ತಮಗೆ ನೀಡಿದ ಸ್ಥಳಗಳಲ್ಲಿಯೇ ವ್ಯಾಪಾರ ಮಾಡಬೇಕು ಮತ್ತು ಯಾವುದೇ ರೀತಿಯ ಅಹಿತಕರ ಘಟನೆ ವಹಿಸಬೇಕು ಎಂದು ತಿಳಿಸಿದರು ಅಲ್ಲದೆ ಪ್ಲಾಸ್ಟಿಕ್ ಮುಕ್ತರಾಗಿಸಿ, ಗ್ರಾಹಕರು ಕೈಚೀಲ ತರುವಂತೆ ತಾಕೀತು ಮಾಡಬೇಕೆಂದು ಮನವಿ ಮಾಡಿದರು.
ಪುರಸಭಾ ಮುಖ್ಯಾಧಿಕಾರಿ ಎಸ್. ಸುರೇಶ್ ಮಾತನಾಡಿಪ್ರತಿ ವ್ಯಾಪಾರಸ್ಥರು ಕಸದ ಬುಟ್ಟಿಯನ್ನು ನಿರ್ವಹಣೆ ಮಾಡಿ ನಮ್ಮ ಪುರಸಭೆಯ ವಾಹನಗಳಿಗೆ ನೀಡಬೇಕು ಮತ್ತು ಆ ಜಾಗದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.ಪಿ.ಎಸ್.ಐ ವಿಜಯಕುಮಾರ್ ಮಾತನಾಡಿ ಯಾವುದೇ ರೀತಿಯ ಗಲಾಟೆ ಗೊಂದಲಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ವ್ಯಾಪಾರ ಮಾಡಿಕೊಳ್ಳುವಂತೆ ತಿಳಿಸಿದರು. ಇತ್ತೀಚಿನ ವ್ಯಾಪಾರಸ್ಥರ ಗಲಾಟೆಯ ಸಂಭದಿಸಿದಂತೆ ಮತ್ತೊಮ್ಮೆ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅಲ್ಲಿನ ವ್ಯಾಪಾರಸ್ಥರು ಪೊಲೀಸ್ ಪೇದೆ ಮಲ್ಲಿಕಾರ್ಜುನ್, ವ್ಯಾಪಾರಸ್ಥರಾದ ರವಿ, ಶಂಕರ್, ಬಸವರಾಜು ಮತ್ತು ಇತರ ನಾಗರೀಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೊಲೀಸ್ ಇಲಾಖೆ ಮತ್ತು ಪುರಸಭೆಯವರ ನಾಗರೀಕ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.