ಕೊಚ್ಚಿ: ಖ್ಯಾತ ತೆಲುಗು ನಟ ಬಾಲಕೃಷ್ಣ ಜೊತೆ ನಾಯಕನಟಿಯಾಗಿ ಅಭಿನಯಿಸಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೇರಳದ ಖ್ಯಾತ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು.. ನಟ ನಂದಮೂರಿ ಬಾಲಕೃಷ್ಣ ನಟನೆಯ ಬ್ಲಾಕ್ ಬಸ್ಟರ್ ಚಿತ್ರ ವೀರ ಸಿಂಹಾ ರೆಡ್ಡಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಮಲಯಾಳಂ ನಟಿ ಹನಿ ರೋಸ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ರನ್ನು ಪೊಲೀಸರು ಬಂಧಿಸಿದ್ದಾರೆ.
ನಟಿ ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಜಾಮೀನು ರಹಿತ ಪ್ರಕರಣಗಳ ಹಿನ್ನಲೆಯಲ್ಲಿ ವಯನಾಡಿನಲ್ಲಿ ಉದ್ಯಮಿ ಬಾಬಿ ಚೆಮ್ಮನೂರ್ ರನ್ನು ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ.
ಇನ್ನು ಉದ್ಯಮ ಬಾಬಿ ಚೆಮ್ಮನೂರ್ ಬಂಧನ ಬೆನ್ನಲ್ಲೇ ಮಾಧ್ಯಮ ಹೇಳಿಕೆ ನೀಡಿರುವ ನಟಿ ಹನಿರೋಸ್, ‘ಇಂದು ನನಗೆ ಶಾಂತಿಯುತ ದಿನವಾಗಿದೆ. ಈ ಹಿಂದೆ ನಾನು ನನಗಾದ ಅನ್ಯಾಯದ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಮಾಹಿತಿ ನೀಡಿದ್ದೆ. ಅವರು ನನಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ.
ಇದೇ ವಾರ ನಟಿ ಹನಿರೋಸ್, ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅಂದು ಅವರು ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ.
ಆದರೆ ಅಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದ ನಟಿ, ‘ವೈಯಕ್ತಿಕವಾಗಿ, ನಾನು ತಿರಸ್ಕಾರ ಮತ್ತು ಸಹಾನುಭೂತಿಯಿಂದ ಮಾನಸಿಕವಾಗಿ ತೊಂದರೆಗೊಳಗಾದ ಜನರ ಇಂತಹ ಭೀಕರವಾದ ಹೇಳಿಕೆಗಳನ್ನು ನಿರ್ಲಕ್ಷಿಸುತ್ತೇನೆ. ಹಾಗೆಂದ ಮಾತ್ರಕ್ಕೆ ನಾನು ಅವರಿಗೆ ಪ್ರತಿಕ್ರಿಯಿಸಲು ಅಸಮರ್ಥಳಾಗಿದ್ದೇನೆ ಎಂದು ಅರ್ಥವಲ್ಲ” ಎಂದು ಪರೋಕ್ಷವಾಗಿ ಕಾನೂನು ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.
ಇನ್ನು ಪ್ರಸ್ತುತ ಬಂಧನಕ್ಕೀಡಾಗಿರುವ ಉದ್ಯಮಿ ಬಾಬಿ ಚೆಮ್ಮನೂರ್.. ಚೆಮ್ಮನೂರು ಜುವೆಲರ್ಸ್ ಸಂಸ್ಥೆಯ ಸಹ ಮಾಲೀಕ ಮತ್ತು ಚೆಮ್ಮನೂರ್ ಗ್ರೂಪ್ನ ಅಧ್ಯಕ್ಷ ಎನ್ನಲಾಗಿದೆ. ಇದು ಆಭರಣಗಳ ವ್ಯಾಪಾರ ಮಾಡುವ ಬೃಹತ್ ವ್ಯಾಪಾರ ಸಮೂಹವಾಗಿದ್ದು, ಇದೇ ಸಂಸ್ಥೆ 2012 ರಲ್ಲಿ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರನ್ನು ಕೇರಳಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ನಟಿ ಹನಿರೋಸ್ ಗೆ ಲೈಂಗಿಕ ಕಿರುಕುಳ ನೀಡಿದ ಘಟನೆ 4 ತಿಂಗಳ ಹಿಂದಿನದ್ದು ಎನ್ನಲಾಗಿದೆ. ನಟಿ ಹನಿರೋಸ್ ಕುರಿತಂತೆ ಬಾಬಿ ಚೆಮ್ಮನೂರು ಆಶ್ಲೇಲ ಟೀಕೆ ಮಾಡುತ್ತಿದ್ದರು. ಈ ಬಗ್ಗೆ ನಟಿ ದೂರು ಕೂಡ ದಾಖಲಿಸಿದ್ದರು. ಇದೀಗ ಕ್ರಮ ಕೈಗೊಂಡಿರುವ ಪೊಲೀಸರು ಉದ್ಯಮಿಯನ್ನು ಬಂಧಿಸಿದ್ದಾರೆ.