ರಾಮನಗರ: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಇದೀಗ ಕಂದಾಯ ಇಲಾಖೆ ಒತ್ತುವರಿ ತೆರೆವು ಕಾರ್ಯಾಚರಣೆಗೆ ಮುಂದಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ, ಅದರಲ್ಲೂ ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಅಪರೂಪದ ಪ್ರಕರಣ ಇದಾಗಿದೆ.
ಹೆಚ್ಡಿಕೆ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ಆರೋಪ ಸಂಬಂಧ ತನಿಖೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ಐಟಿ ರಚನೆ ಮಾಡಿದ್ದರು.ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ವೆ ನಂ.7, 8, 9, 10, 16, 17, 79ರಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಂದಾಯ ಇಲಾಖೆ, ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ನಡೆದಿದೆ. ಇದೀಗ ಸರ್ಕಾರಕ್ಕೆ ಸರ್ವೆ ವರದಿ ಸಲ್ಲಿಸಿ ಒತ್ತುವರಿ ತೆರವು ಮಾಡಲು ಇಲಾಖೆ ಮುಂದಾಗಿದೆ. ಇಂದು ಕಂದಾಯ ಇಲಾಖೆ ಅಧಿಕಾರಿಗಳಿಂದ ಒತ್ತುವರಿ ತೆರವು ಸಾಧ್ಯತೆ ಇದೆ. ಒತ್ತುವರಿ ತೆರವಿಗೆ ಕುಮಾರಸ್ವಾಮಿ ತೋಟದ ಮನೆಯ ಮುಂದೆ ಎರಡು ಜೆಸಿಬಿಗಳು ಸಿದ್ಧವಾಗಿವೆ.