ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ರೀತಿಯಲ್ಲಿ ಗಣರಾಜ್ಯೋತ್ಸವದಂದು 6 ಗಣ್ಯರ ಮನೆ ಸ್ಫೋಟಿಸುವುದಾಗಿ ಕರೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ರೀತಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದು, ಗಣರಾಜ್ಯೋತ್ಸವದಂದು ನಗರದ ಆರು ಜನ ಗಣ್ಯರ ಮನೆ ಸ್ಪೋಟಿಸುವುದಾಗಿ ಹೇಳಿದ್ದ. ಈ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಇದೀಗ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಜನವರಿ 9 ರಂದು ಸಂಜೆ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದು, ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದು ಹುಸಿ ಬಾಂಬ್ ಕರೆಯಾದರೂ ಸಹ ಮುನ್ನೆಚ್ಚರಿಕೆಯಾಗಿ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಸಿಕೊಂಡಿದ್ದರು. ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ಆರು ಜನರ ಹೆಸರು, ವಿಳಾಸವನ್ನು ಆಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸೇಡು ತೀರಿಸಿಕೊಳ್ಳಲು ಹುಸಿ ಕರೆ
ಇನ್ನು ಪೊಲೀಸರ ತೀವ್ರ ವಿಚಾರಣೆ ಬಳಿಕ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಬಂಧಿತ ಆರೋಪಿ ಸೈಯದ್ ತನ್ನ ಸೇಡು ತೀರಿಸಿಕೊಳ್ಳಲು ಈ ರೀತಿ ಹುಸಿ ಬಾಂಬ್ ಕರೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ವ್ಯವಹಾರದಲ್ಲಿ ನಷ್ಟ ಆಗಿದ್ದಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಸೈಯದ್ ನಗರದಲ್ಲಿ ಸ್ಫೋಟಗಳನ್ನು ನಡೆಸಲು ಇಸ್ಮಾಯಿಲ್, ಅಲ್ತಾಫ್, ನಹಿದ್, ಅಮ್ಜಾದ್ ಮತ್ತು ಹುಮಾಯೂನ್ ಎಂಬುವವರು ಸಂಚು ರೂಪಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ.
ಬಾಂಬ್ ಕರೆಯ ವೇಳೆ ಕೆ.ಆರ್. ಮಾರ್ಕೆಟ್ನ ಇಸ್ಮಾಯಿಲ್, ಬೊಮ್ಮನಹಳ್ಳಿ ಅಲ್ತಾಫ್, ಜೆಸಿನಗರದ ನಾಹೀದ್, ಹೆಚ್.ಬಿ.ಆರ್ ಲೇಔಟ್ ನ ಅಮ್ಜದ್, ನೀಲಸಂದ್ರದ ಹುಮಾಯೂನ್ ಹಾಗೂ ತಬ್ರೇಜ್ ಹೆಸರು ಹಾಗೂ ಮೊಬೈಲ್ ನಂಬರನ್ನು ಆರೋಪಿ ನೀಡಿದ್ದ ಎಂದು ತಿಳಿದುಬಂದಿದೆ.
ಆದರೆ ವಿಚಾರಣೆ ವೇಳೆ ಐದು ಜನರ ಮೇಲೆ ಸೇಡು ತೀರಿಸಿಕೊಳ್ಳಲು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.