ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಂಪುಟವನ್ನು ಪುನರ್ ರಚನೆ ಮಾಡಲಾಗುವುದು ಎಂಬ ಸುಳಿವು ದೊರೆತ ಬೆನ್ನಲ್ಲಿಯೇ ಸಚಿವಾಕಾಂಕ್ಷಿಗಳು ಸಂಪುಟದಲ್ಲಿ ಸ್ಥಾನ ಪಡೆಯಲು ಕಾರ್ಯತಂತ್ರ ರೂಪಿಸತೊಡಗಿದ್ದಾರೆ.
ಸಚಿವ ಆಕಾಂಕ್ಷಿಗಳಾಗಿರುವ ಬಹುತೇಕ ಹಿರಿಯ ಮತ್ತು ಕಿರಿಯ ಶಾಸಕರು ಸಚಿವರಾಗಲು ತಮ್ಮದೇ ಆದ ರೀತಿಯಲ್ಲಿ ತಮಗೆ ಬೇಕಾದ ರಾಜಕೀಯ ನಾಯಕರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪಿಯಂದು ಹೇಳಲಾಗಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಈ ಬಾರಿ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಎಐಸಿಸಿ ಮಾಜಿ ಪ್ರಧಾನಕಾರ್ಯದರ್ಶಿ, ಪಕ್ಷದ ಹಿರಿಯ ಮುಖಂಡರಾದ ಬಿ.ಕೆ. ಹರಿಪ್ರಸಾದ್ ಅವರು ಸಹ ತೀವ್ರ ಆಕಾಂಕ್ಷಿಯಾಗಿದ್ದಾರೆ.ಮಳವಳ್ಳಿಯ ನರೇಂದ್ರ ಸ್ವಾಮಿ, ಭದ್ರಾವತಿಯ ಸಂಗಮೇಶ್ವರ್, ಬಾಗೇಪಲ್ಲಿಯ ಸುಬ್ಬಾರೆಡ್ಡಿ, ವಿನಯ್ಕುಲಕರ್ಣಿ ವಿಜಯಾನಂದ ಕಾಶಪ್ನವರ್, ಎನ್ಎ ಹ್ಯಾರೀಸ್, ಸಾಗರದ ಗೋಪಾಲಕೃಷ್ಣ ಬೆಳೂರು ಸೇರಿದಂತೆ ಅನೇಕ ಶಾಸಕರು ಸಂಪುಟ ಸೇರಲು ಒಲವು ವ್ಯಕ್ತಪಡಿಸಿದ್ದು, ಬಹುತೇಕ ಡಿಸೆಂಬರ್9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದ ನಂತರ ಸಂಪುಟ ಪುನರ್ ರಚನೆಯಾಗಲಿದ್ದು, ಸುಮಾರು ಏಳೆಂಟು ಜನರನ್ನು ಸಂಪುಟದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಬೇರೆಯವರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.