ಬೆಳಗಾವಿ: ಗಾಂಜಾ ಸೇವಿಸುವ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ನಡೆದ ಗಲಾಟೆ ತಮ್ಮನ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಶುಕ್ರವಾರ (ಜ.10) ತಡರಾತ್ರಿ ನಡೆದಿದೆ.
ಸುಶಾಂತ ಸುಭಾಷ್ ಪಾಟೀಲ (20) ಮೃತಪಟ್ಟ ಯುವಕ. ಘಟನೆಯಲ್ಲಿ ಓಂಕಾರ ಸುಭಾಷ ಪಾಟೀಲ (23) ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸಹೋದರರಿಬ್ಬರೂ ಕೆಲ ವರ್ಷಗಳಿಂದ ಗಾಂಜಾ ಸೇವನೆ ಚಟ ಬೆಳೆಸಿಕೊಂಡಿದ್ದು, ಮತ್ತಿತನಲ್ಲಿ ಪೋಷಕರೊಂದಿಗೆ ಹಾಗೂ ಪರಸ್ಪರ ಜಗಳವಾಡುತ್ತಿದ್ದರು, ಶುಕ್ರವಾರ ಮನೆಕೆಲಸದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ನೂಕಾಟ– ತಳ್ಳಾಟದಲ್ಲಿ ಮನೆಯ ಎರಡನೇ ಮಹಡಿಯಿಂದ ಇಬ್ಬರೂ ಕೆಳಕ್ಕೆ ಬಿದ್ದಿದ್ದು, ಸುಶಾಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಓಂಕಾರ್ ಪಾಟೀಲ್ ಅವರ ಕಾಲುಗಳು ಮತ್ತು ಒಂದು ಕೈ ಮುರಿದಿದ್ದು, ತೀವ್ರ ಗಾಯಗೊಂಡಿದ್ದಾರೆ. ಇದೀಗ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬೆನ್ನಲ್ಲೇ ಗ್ರಾಮೀಣ ಪ್ರದೇಶದ ಯುವಕರಲ್ಲಿ ಮಾದಕ ವ್ಯಸನ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮಾದಕವಸ್ತು ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಘಟನೆ ಬಳಿಕ ಮಾರಿಹಾಳ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.