ಅಹ್ಮದಾಬಾದ್: ಗುಜರಾತ್ ಕರಾವಳಿಯಲ್ಲಿ ಭಾರತೀಯ ಕರಾವಳಿ ಪಡೆಯ ತರಬೇತಿ ನಿರತ ಹೆಲಿಕಾಪ್ಟರ್ ಪತನಕ್ಕೀಡಾಗಿದ್ದು, ಹೆಲಿಕಾಪ್ಟರ್ ನಲ್ಲಿದ್ದ ಮೂವರು ದುರ್ಮರಣಕ್ಕೀಡಾಗಿದ್ದಾರೆ.
ಹೌದು..ಗುಜರಾತ್ನ ಪೋರ್ಬಂದರ್ನಲ್ಲಿ ಎಎಲ್ಎಚ್ ಧ್ರುವ್ ಹೆಸರಿನ ಭಾರತೀಯ ಕರಾವಳಿ ಪಡೆ ಹೆಲಿಕಾಪ್ಟರ್ ಪತನಗೊಂಡಿದ್ದು ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಪೈಲಟ್ಗಳಿಗೆ ತರಬೇತಿ ನೀಡುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ಹೆಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ಗಳು ಸೇರಿದಂತೆ ಮೂವರು ಸಿಬ್ಬಂದಿ ಇದ್ದರು. ಈ ಘಟನೆಯಲ್ಲಿ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮಧ್ಯಾಹ್ನ 12:10 ರ ಸುಮಾರಿಗೆ ನಡೆದಿದೆ ಎಂದು ಪೋರಬಂದರ್ ಪೊಲೀಸ್ ವರಿಷ್ಠಾಧಿಕಾರಿ ಭಾಗೀರಥ್ಸಿನ್ಹ ಜಡೇಜಾ ತಿಳಿಸಿದ್ದಾರೆ.
ಮೂವರು ಸಿಬ್ಬಂದಿ ಇದ್ದ ಐಸಿಜಿಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಪೋರಬಂದರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದರು.
ಮೂವರು ಸಿಬ್ಬಂದಿಯನ್ನು ಹೆಲಿಕಾಪ್ಟರ್ನಿಂದ ಹೊರಕ್ಕೆ ಕರೆತಂದು ಪೋರಬಂದರ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಸುಟ್ಟ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕಮಲಾ ಬಾಗ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜೇಶ್ ಕಾನ್ಮಿಯಾ ತಿಳಿಸಿದ್ದಾರೆ.