ಕಲಬುರಗಿ: ಬೀದರ್ನಲ್ಲಿ ಯುವ ಗುತ್ತಿಗೆದಾರ ಸಚಿನ್ (26 ವರ್ಷ) ಅತ್ಮಹತ್ಯೆಗೆ ಶರಣಾಗಿದ್ದಾರೆ. 27 ಪುಟಗಳ ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಸಚಿನ್, ಡೆತ್ ನೋಟ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬುವವರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ ಮೃತ ಸಚಿನ್ ಅವರಿಂದ ಇನ್ನೂ 1 ಕೋಟಿ ಹಣ ನೀಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇನ್ನು ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಇನ್ನು ಈ ಪ್ರಕರಣ ಸಂಬಂಧ ಖುದ್ದು ರಾಜು ಕಪನೂರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.
ಕಳೆದ 1 ವರ್ಷದ ಹಿಂದೆ ಮೃತ ಸಚಿನ್ ನನಗೆ ಪರಿಚಯವಾಗಿದ್ದ. ಬಿಇ ಸಿವಿಲ್ ಮುಗಿದಿದೆ, ಕಾಂಟ್ರಾಕ್ಟರ್ ಲೈಸೆನ್ಸ್ ಇದೆ ಎಂದಿದ್ದ. ನಮ್ಮ ಲೈಸೆನ್ಸ್ ಮೇಲೆ ಕಾಮಗಾರಿ ಮಾಡೋಣ ಅಂತ ಹೇಳಿದ್ದ. ಹೀಗಾಗಿ ಆತನ ಜೊತೆ ಕೆಲಸ ಮಾಡೋದಕ್ಕೆ ನಿರ್ಧರಿಸಿದ್ದೆವು. ಸಚಿನ್ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 65 ಲಕ್ಷ ಹಣ ಹಾಕಿದ್ದೆ. ಮೊದಲು ವಿಮಾನ ನಿಲ್ದಾಣದ ಕಾಮಗಾರಿ ಟೆಂಡರ್ ಹಾಕಿದ್ದೆವು. ಅದು ಆಗಿರಲಿಲ್ಲ, ಬಳಿಕ ಕೆಐಡಿಎಲ್ ಹಾಕಿದ್ದೆವು ಅದೂ ಆಗಿರಲ್ಲ. ಬಳಿಕ ವಿಚಾರಣೆ ಮಾಡಿದಾಗ ಅದು ಫೇಕ್ ಎಂದು ಗೊತ್ತಾಯ್ತು ಹೀಗಾಗಿ ನಮ್ಮ ಹಣ ನನಗೆ ವಾಪಸ್ ಕೊಡು ಎಂದು ಕೇಳಿದ್ದೆವು. ಆದರೆ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಸಚಿನ್ ಓಡಾಡ್ತಿದ್ದ. ಒಂದೂವರೆ ತಿಂಗಳ ಹಿಂದೆ ಸಚಿನ್ ಮನೆಯಲ್ಲಿ ವಿಚಾರ ತಿಳಿಸಿದ್ದೆವು. ಸಚಿನ್ ಸಹೋದರಿಯರು ಸಲ್ಪ ಸಮಯಾವಕಾಶ ಕೇಳಿದ್ದರು. ಆದರೂ ಜಾಲತಾಣದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಶುರು ಮಾಡಿದ್ದ. ನಮ್ಮಿಂದ ಕಿರುಕುಳ ಆಗ್ತಿದೆ ಅಂತಾ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಕಲಬುರಗಿ ಗ್ರಾಮೀಣ ಠಾಣೆಗೆ ನಾನು ದೂರು ನೀಡಿದ್ದೆ. ಆದರೆ ಈಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆಯಾಗಲಿ ಎಲ್ಲಾ ಸತ್ಯಾಂಶ ಹೊರಬರುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.