ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಗಾಂಧಿಗಂಜ್ನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಓರ್ವ ಮಹಿಳಾ ಹೆಡ್ ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ಪುರುಷ ಹೆಡ್ ಕಾನ್ಸ್ಟೇಬಲ್ನ ಸಸ್ಪೆಂಡ್ ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ. ರಾಜೇಶ್ ಹಾಗೂ ಶಾಮಲಾ ಎಂಬ ಇಬ್ಬರು ಹೆಡ್ ಕಾನ್ಸ್ಟೇಬಲ್ಗಳೇ ಅಮಾನತುಗೊಂಡವರು.
ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು ಕೂಡಲೇ ಬೀದರ್ನ ಗಾಂಧಿಗಂಜ್ ಠಾಣೆಗೆ ತೆರಳಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಹೀಗೆ ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಕೂಡಲೇ ಹುಡುಕಿ ಕೊಡುವಂತೆ ಸಚಿನ್ ಸಹೋದರ ಹಾಗೂ ಸಹೋದರಿ ಮನವಿ ಮಾಡಿದ್ದರು. ಆದ್ರೆ, ದೂರು ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಕುಟುಂಬಸ್ಥರ ದೂರು ಸ್ವೀಕರಿಸಿ ಕಾರ್ಯಪ್ರವೃತ್ತರಾಗಿದ್ದರೆ ಸಚಿನ್ನ ರಕ್ಷಣೆ ಮಾಡಬಹುದಿತ್ತೆನೋ. ಆತನ ಮೊಬೈಲ್ ಲೋಕೇಷನ್ ಟ್ರ್ಯಾಕ್ ಮಾಡಿ ಆತನನ್ನು ಪತ್ತೆ ಮಾಡಬಹುದಿತ್ತು. ಆದ್ರೆ, ಪೊಲೀಸರು ಯಾವುದೇ ತಲೆ ಕಡೆಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ.