ಮಂಡ್ಯ: ನಾಡೊಜಾ ಗೊ.ರು.ಚನ್ನಬಸಪ್ಪ ಅವರು ತ್ರಿಕರಣ ಶುದ್ಧಿ ಕೆಲಸ ಮಾಡಿದವರು. ಜನಪದ ಸಾರಸ್ವತ ಲೋಕದ ದಿಗ್ಗಜರು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಮನು ಬಳಿಗಾರ ಅಭಿಪ್ರಾಯಪಟ್ಟರು.ಅವರು ಶ್ರೀರಂಗಪಟ್ಟಣದ ಹೊಟೇಲ್ ಮಯೂರ ವ್ಯೂವ್ನಲ್ಲಿ ಸಂಪಾದಕರೊಂದಿಗೆ ಮಾತನಾಡಿದರು.
ಗೊ.ರು.ಚನ್ನಬಸಪ್ಪ ಅವರು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಸಮ್ಮೇಳನಕ್ಕೆ ಶೋಭೆ ತಂದಿದೆ. ಅವರಲ್ಲಿನ ಅಗಾಧವಾದ ವಿದ್ವತ್, ಜನಪದದ ಬಗ್ಗೆ ಇರುವ ಕಳಕಳಿ ಮಹತ್ವವಾದದ್ದು. ಜಾನಪದ ವಿಶ್ವ ವಿದ್ಯಾಲಯ ಆಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಗೊ.ರು.ಚ. ಮೊದಲಿಗರಾಗಿದ್ದಾರೆ. ಜನಪದವು ಎಲ್ಲಾ ಸಾಹಿತ್ಯದ ತಾಯಿ ಬೇರಾಗಿದೆ. ಅವರು ಪ್ರತಿಪಾದಿಸಿರುವುದರಲ್ಲಿ ವಾಸ್ತವವಿದೆ ಎಂದು ನಾನೂ ಕೂಡ ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದೆ.
ಜಾನಪದಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ದಿಗ್ಗಜರಲ್ಲಿ ಮೊದಲಿಗರು. ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.ಶರಣ ಸಾಹಿತ್ಯ ಪರಿಷತ್ನಲ್ಲೂ ಅವರು ತ್ರಿಕರಣ ಶುದ್ಧಿಯಿಂದ ಕೆಲಸ ಮಾಡಿದ್ದಾರೆ. ಶರಣ ಸಾಹಿತ್ಯ ಪರಿಷತ್ನ ಗೌರವ ಧನವನ್ನು ಕೂಡ ಅವರು ಪಡೆದುಕೊಂಡಿಲ್ಲ.
ಇಂತಹ ಗುಣವು ಬಹಳ ಜನರಿಗೆ ಪ್ರೇರಣೆಯಾಗಿದೆ. ಅವರ ಪ್ರೇರಣೆಯಿಂದಾಗಿ ನಾನೂ ಕೂಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಗೌರವ ಧನವನ್ನು ಪಡೆದುಕೊಂಡಿಲ್ಲ. ಹೀಗೆ ಗೊ.ರು.ಚನ್ನಬಸಪ್ಪ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಅವರ ಮಾರ್ಗದರ್ಶನ ಜನಪದ ಲೋಕಕ್ಕೆ ಅಗತ್ಯವಿದೆ. ಅವರು ಇನ್ನೂ ಹೆಚ್ಚು ಕಾಲ ನಮ್ಮೊಂದಿಗೆ ಇದ್ದು ಜನಪದ ಸಾಹಿತ್ಯದ ಉಜ್ವಲಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮನು ಬಳಿಗಾರ ನುಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಿನಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾದ ಡಾ. ಜಿ.ವೈ.ಪದ್ಮಾ ನಾಗರಾಜ, ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ಖಜಾಂಚಿ ಖಾನ್ ಸಾಬ್ ಮೋಮಿನ್, ಉಪಾಧ್ಯಕ್ಷ ವಿ.ಅನೂಪಕುಮಾರ, ಗೋವಿಂದನಹಳ್ಳಿ ಕೃಷ್ಣೇಗೌಡ, ಡಾ.ಗುಣವಂತ ಮಂಜುನಾಥ ಸೇರಿದಂತೆ ಇನ್ನಿತರರು ಇದ್ದರು.