ಬೆಂಗಳೂರು: ಕುವೆಂಪು ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದ್ದು, ಆದರ್ಶ ಜೀವನಕ್ಕೆ ಅವಶ್ಯಕವಾಗಿದೆ, ಯುವ ಸಮೂಹ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ . ಅಂಬಿಕಾ ಎ ಆರ್ ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋವಿಂದರಾಜನಗರ ವಾರ್ಡ್ನ ಕನಕಗಿರಿ ಉದ್ಯಾನವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ರಾಷ್ಟಕವಿ ಕುವೆಂಪು ಅವರ 120ನೇ ಜನ್ಮ ದಿನೋತ್ಸವವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಜಯಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್, ಸೌಹಾರ್ದ ಕರ್ನಾಟಕ ಮತ್ತು ಹಸಿರೇ-ನಮ್ಮುಸಿರು ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲಾ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತನಗರದ 15 ಸ್ಥಳಗಳಲ್ಲಿರುವ ವಿಶ್ವ ಮಾನ್ಯರಾದ ಬಸವೇಶ್ವರ, ಭಕ್ತ ಕನಕದಾಸ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡ, ಡಾ ಬಿ ಆರ್ ಅಂಬೇಡ್ಕರ್, ಮಹಾತ್ಮಾ ಗಾಂಧಿ, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ.ರಾಜಕುಮಾರ್, ಡಿ. ವಿ. ಗುಂಡಪ್ಪ, ಹೆಚ್. ನರಸಿಂಹಯ್ಯ, ಸರ್ ಎಂ ವಿಶೇಶ್ವರಯ್ಯ ಪ್ರತಿಮೆಗಳಿಗೆ ಏಕಕಾಲದಲ್ಲಿ ಪುಷ್ಪನಮನ ಸಲ್ಲಿಸುವ ಮತ್ತು ವಿಶ್ವ ಮಾನವ ಸಂದೇಶದ ಕಿರುಹೊತ್ತಿಗೆ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನಕಗಿರಿ ಉದ್ಯಾನವನದಲ್ಲಿ ಇರುವ ಭಕ್ತ ಕನಕದಾಸರ ಭವ್ಯವಾದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಭಾರತದ ಅಗ್ರಮಾನ್ಯ ಬರಹಗಾರರಲ್ಲಿ ಪ್ರಮುಖರಾದ ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿ ಕನ್ನಡ ಸಾರಸ್ವತ ಲೋಕವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಮಹಾನ್ ದಾರ್ಶನಿಕರು. ಮಹಾಕಾವ್ಯ, ಜೀವನಚರಿತ್ರೆ, ನಾಟಕ, ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹ ಹೀಗೆ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿ ಕನ್ನಡ ನುಡಿ ಸೇವೆಗಾಗಿ ಜ್ಞಾನಪೀಠ, ಪದ್ಮಭೂಷಣ, ರಾಷ್ಟ್ರಕವಿ, ಕರ್ನಾಟಕರತ್ನ ಮುಂತಾದ ನೂರಾರು ಪ್ರಶಸ್ತಿಗಳನ್ನು ಮುಡಿಗೆ ಏರಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯಗಳನ್ನು ಕುರಿತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷರಾದ ಬಾಲಾಜಿ ರಾವ್, ಜಯಕರ್ನಾಟಕ ಸಂಘಟನೆ ಬೆಂಗಳೂರು ನಗರ ಅಧ್ಯಕ್ಷರಾದ ಯೋಗಾನಂದ್, ಗೋವಿಂದರಾಜನಗರ ಅಧ್ಯಕ್ಷರಾದ ಪುರುಷೋತ್ತಮ್, ಗೋವಿಂದರಾಜನಗರ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ರ. ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡ ರಾಮಚಂದ್ರರವರು ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಮಹತ್ವದ ಕುರಿತು ಮಾತನಾಡಿದರು ವಿಶ್ವಮಾನವ ಸಂದೇಶದ ಕಿರು ಹೊತ್ತಿಗೆಯನ್ನು ಹಂಚಲಾಯಿತು.
ಈ ವೇಳೆ ಹಿರಿಯ ಕನ್ನಡ ಹೋರಾಟಗಾರರಾದ ಅರಸಪ್ಪ, ಮುಖ್ಯ ಅತಿಥಿಗಳಾದ ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿಗಳ ವಿಚಾರ ವೇದಿಕೆ ಉಪಾಧ್ಯಕ್ಷರಾದ ಗುರುಶಂಕರ್, ಗೋವಿಂದರಾಜನಗರ ಕಸಾಪ ಪದಾಧಿಕಾರಿ ವೆಂಕಟೇಶ್, ಯೋಗ ಶಿಕ್ಷಕಿ ನಾಗರತ್ನ ಎಸ್ ಹಿರೇಮಠ್, ಪತ್ರಕರ್ತೆ ಪೂರ್ಣಿಮಾ ಬಳೆಗಾರ್, ಜಯ ಕರ್ನಾಟಕ ಸಂಘಟನೆಯ ಮಂಜುನಾಥ್, ಭಜರಂಗಿ ಶಿವು, ಜ್ಞಾನ ವಿಜ್ಞಾನ ಸಮಿತಿಯ ಗಂಗಾಧರ್ ಮತ್ತಿತರರ ಮಹಿಳಾ ಮುಖಂಡರು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಾಗರೀಕರು ಉಪಸ್ಥಿತರಿದ್ದರು.