ಬೆಂಗಳೂರು: ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡಿನ ಅಗ್ರಹಾರ ದಾಸರಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜನವರಿ 4ನೇ ತಾರೀಖಿನಂದು ನಡೆಯಲಿರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ರಾಜ್ಯಮಟ್ಟದ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಕನ್ನಡ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕಷ್ಣ ಹೇಳಿದರು.
ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ ಮೂಡಲಪಾಳ್ಯದಲ್ಲಿ ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ಕ್ಷೇತ್ರದ ಕನ್ನಡ ಜಾನಪದ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಮರೆಯಾಗುತ್ತಿರುವ ಜಾನಪದ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ ಜಾನಪದ ಸಮ್ಮೇಳನವನ್ನು ವೈವಿಧ್ಯಮಯವಾಗಿ ಆಚರಿಸುವ ಮೂಲಕ ಮಾದರಿ ಸಮ್ಮೇಳನಕ್ಕೆ ಎಲ್ಲರೂ ಸಾಕ್ಷಿಯಾಗಬೇಕೆಂದರು.
ಗೋವಿಂದರಾಜನಗರ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರ. ನರಸಿಂಹಮೂರ್ತಿ ಮಾತನಾಡಿ, ಕನ್ನಡ ಜಾನಪದ ಸಮ್ಮೇಳನ ಜರುಗುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಧಾರ್ಮಿಕ, ಶಿಕ್ಷಣ ಮತ್ತು ಸಹಕಾರಕ್ಕೆ ಹೆಸರುವಾಸಿಯಾಗಿದೆ. ನಾಡು-ನುಡಿ-ನೆಲ-ಜಲ-ಸಂಸ್ಕೃತಿ-ಪರಂಪರೆಯಿಂದ ಸಂಪದ್ಭರಿತವಾಗಿದೆ. ಈ ಜಾನಪದ ಸಮ್ಮೇಳನದಲ್ಲಿ ನಾಡಿನ ವಿವಿಧ ಭಾಗಗಳಿಂದ ಜಾನಪದ ಕಲಾವಿದರು, ಸಾಹಿತಿಗಳು, ಬರಹಗಾರರು ವಿಶೇಷ ಉಪನ್ಯಾಸ ಗೋಷ್ಠಿ ನಡೆಸಿಕೊಡುವರು.
ಖ್ಯಾತ ಜಾನಪದ ಗಾಯಕರು ಹಾಗೂ ಕಲಾವಿದರಿಂದ ಜಾನಪದ ಗಾಯನ, ಜಾನಪದ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗುವದು. ಈ ಸಮ್ಮೇಳನಕ್ಕೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು, ಸಂಘ-ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಹೆಚ್ ಪಿ ಮಂಜುನಾಥ್, ಬಿಬಿಎಂಪಿ ಮಾಜಿ ಸದಸ್ಯರಾದ ಉಮಾಶಂಕರ್, ಡಾ.ರಾಜಕುಮಾರ್ ವಾರ್ಡ್ ಅಧ್ಯಕ್ಷರಾದ ಪುರುಷೋತ್ತಮ್, ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿಗಳ ವಿಚಾರ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ ವಿ ಸಂದೀಪ್, ಗೋವಿಂದರಾಜನಗರ ಘಟಕದ ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಅಶ್ವಥ್ ನಾರಾಯಣ್, ಕೇಶವ ರಾಜ್, ಶಿವಶಂಕರ್, ಸವಿತಾ, ರಾಮಾಂಜನೇಯ ಮುಖಂಡರಾದ ಗುರುಶಂಕರ್, ಹರ್ಷ, ಕೇಶವ ಮೂರ್ತಿ, ರಾಮಚಂದ್ರ, ಪ್ರವೀಣ್ ಮತ್ತಿತರರು ಹಾಜರಿದ್ದರು.