ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ೨೦೨೫ರ ಜನವರಿ ೧೮ರಂದು ಶನಿವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿಗಳು, ಮಾಜಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್ ಬಾಲಾಜಿ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ರ. ನರಸಿಂಹಮೂರ್ತಿ ಮಾಹಿತಿ ನೀಡಿ, ಡಾ. ಸಿ. ಸೋಮಶೇಖರ್ ಅವರಿಗೆ ಕನ್ನಡ ಜಾನಪದ ಸಮ್ಮೇಳನಕ್ಕೆ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು ಎಂದರು.
ಈ ಹಿಂದೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರಾಗಿಯೂ ಡಾ. ಸಿ. ಸೋಮಶೇಖರ್ ರವರು ಕಾರ್ಯ ನಿರ್ವಹಿಸಿದ್ದರು. ಜೊತೆಗೆ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ರೂವಾರಿಯೂ ಆಗಿ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಧನೆಯ ಶಿಖರವೇರಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಇಂತಹ ಮಹನೀಯರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಒಪ್ಪಿಗೆ ಸೂಚಿಸಿರುವ ನಮ್ಮ ಕನ್ನಡ ಜಾನಪದ ಪರಿಷತ್ತಿನ ಮತ್ತು ನಮ್ಮ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಹೆಮ್ಮೆಯ ಸಂಗತಿ. ಕನ್ನಡ ಜಾನಪದ ಸಮ್ಮೇಳನವನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಕಷ್ಣರವರ ಅಧ್ಯಕ್ಷತೆಯಲ್ಲಿ ಅತ್ಯಂತ ವೈಭವವಾಗಿ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕ ಅಧ್ಯಕ್ಷ ರ. ನರಸಿಂಹಮೂರ್ತಿ ತಿಳಿಸಿದರು.
ಈ ವೇಳೆ ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕರಾದ ಪ್ರೊ ಕೆಎಸ್ ಕೌಜಲಗಿ, ಕನ್ನಡ ರಾಜ್ಯ ಯುವ ಸಂಘಗಳ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ರವಿಕಾಂತ್, ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಅಶ್ವಥ್ ನಾರಾಯಣ್, ಕೇಶವ ರಾಜ್, ಸಿ. ಶಿವಶಂಕರ್, ಸವಿತಾ, ರಾಮಾಂಜನೇಯ ಮತ್ತಿತರರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೋವಿಂದರಾಜನಗರ ವಿ.ಕ್ಷೇತ್ರ ಪ್ರಥಮ ಕನ್ನಡ ಜಾನಪದ ಸಮ್ಮೇಳನಕ್ಕೆ ಡಾ.ಸಿ.ಸೋಮಶೇಖರ್ ಸರ್ವಾಧ್ಯಕ್ಷ
