ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನುಂಗಲಾರದ ಹಾಗೂ ಉಗಿಯಲಾರದ ಬಿಸಿ ತುಪ್ಪವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರುಅನ್ನಭಾಗ್ಯದ ಹೊರೆ ಹೊರ ಲಾಗದೆ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆದಾರರಿಗೆ, ಸರ್ಕಾರಿ ನೌಕರರಿಗೆ ಉಚಿತ ಅಕ್ಕಿಕೊಡಬೇಕಾ ಎಂದು ಈ ರಾಜ್ಯ ಕಂಡಮಹಾನ್ ದಕ್ಷ ಆಡಳಿತಗಾರರ ರೀತಿ ಹೇಳಿಕೆ ಕೊಟ್ಟಿದ್ದಾರೆ.
ಹಾಗಾದರೆ ಶಕ್ತಿ ಗ್ಯಾರೆಂಟಿ ಅಡಿಯಲ್ಲಿ ತೆರಿಗೆದಾರರು, ಸರ್ಕಾರಿ ನೌಕರರು ಉಚಿತ ಬಸ್ಸು ಸೇವೆ ಬಳಸುತ್ತಿಲ್ಲವೇ?
ಹಾಗಾದರೆ ಗೃಹಜ್ಯೋತಿ ಗ್ಯಾರೆಂಟಿ ಯೋಜನೆಯಡಿ ತೆರಿಗೆದಾರರು, ಸರ್ಕಾರಿ ನೌಕರರು 200 ಯೂನಿಟ್ ವರೆಗೂ ಉಚಿತ ಕರೆಂಟ್ ಪಡೆಯುತ್ತಿಲ್ಲವೇ? ಅಥವಾ ಈ ಹೇಳಿಕೆ ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳಲ್ಲೂ ಶೀಘ್ರದಲ್ಲೇ ಫಲಾನುಭವಿಗಳಿಗೆ ಕೊಕ್ ನೀಡಲಾಗುತ್ತದೆ ಎಂಬ ಮುನ್ಸೂಚನೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಎಡಬಿಡಂಗಿ ಈ ಕಾಂಗ್ರೆಸ್ ಸರ್ಕಾರಕ್ಕೆ ಒಂದು ದೂರದೃಷ್ಟಿ, ಪೂರ್ವಸಿದ್ಧತೆ, ಗೊತ್ತು, ಗುರಿ ಇವ್ಯಾವುದೂ ಇಲ್ಲ. ಕೇವಲ ಚುನಾವಣೆಗೆ ಗೆಲ್ಲಲು ಮನಸ್ಸಿಗೆ ಬಂದ ಹಾಗೆ ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಈಗ ಗ್ಯಾರೆಂಟಿಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ. ಇದೇ ಸತ್ಯ ಎಂದಿದ್ದಾರೆ.