ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿಶ್ವನಾಥರೆಡ್ಡಿರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾತನಾಡಿ ಮಹಿಳೆಯರ ಮತ್ತು ಯುವ ಸಮುದಾಯದ ಸಬಲೀಕರಣಕ್ಕಾಗಿ ದೇಶದಲ್ಲಿಯೇ ಮಹತ್ವಕಾಂಕ್ಷೆ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಕರ್ನಾಟಕವಾಗಿದೆ.ಸಾಮಾಜಿಕ ಚಿಂತನೆಯೊಂದಿಗೆ ಈ ಯೋಜನೆ ಸರ್ಕಾರ ರೂಪಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಶೇ100 ರಷ್ಟು ಪ್ರಗತಿ ಸಾಧಿಸಲು ವಿಶೇಷ ಗಮನ ನೀಡಬೇಕೆಂದು ತಿಳಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಎನ್ ಮುನಿರಾಜು ಮಾತನಾಡಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಸ್ತೃತ ಪ್ರಚಾರ ಕೈಗೊಂಡು ಪ್ರಗತಿ ಸಾಧಿಸಲು ವಿಶೇಷ ಗಮನ ನೀಡಬೇಕೆಂದು ತಿಳಿಸಿದರು.
ಶಕ್ತಿ ಯೋಜನೆಯಡಿ ತಾಲ್ಲೂಕು ವ್ಯಾಪ್ತಿಯಲ್ಲಿ 73 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು,ಸರ್ಕಾರ 21.56 ಕೋಟಿ ರೂ.ಗಳನ್ನು ಭರಿಸಿದೆ.
ಗೃಹ ಜ್ಯೋತಿ ಯೋಜನೆಯಡಿ 844439 ಗೃಹಗಳಿಗೆ ಸಂಪರ್ಕಕ್ಕೆ ಪ್ರತಿ ಮಾಹೆ 3.24 ಕೋಟಿ ಹಣ ಸರ್ಕಾರ ಭರಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ 64249 ಫಲಾನುಭವಿಗಳಿದ್ದು ಜಿಲ್ಲೆಗೆ ಇದುವರೆವಿಗೂ 417 ಕೋಟಿ ರೂ ಹಣವನ್ನು ಗೃಹಲಕ್ಷ್ಮಿಯರಿಗೆ ಬಿಡುಗಡೆ ಮಾಡಿದ್ದು,ಮಹಿಳೆಯರ ಆರ್ಥಿಕ ಶಕ್ತಿ ವೃದ್ದಿಸಿದೆ. ಅನ್ನ ಭಾಗ್ಯ ಯೋಜನೆಯಡಿ 62836 ಪಡಿತರ ಚೀಟಿಗಳಿಗೆ ಆಹಾರದ ಜೊತೆಗೆ ಹಣ ನೀಡಲಾಗುತ್ತಿದೆ.
ಬಾಕಿ ಇರುವ ಹೊಸ ಪಡಿತರ ಚೀಟಿಗಳನ್ನು ತ್ವರಿತವಾಗಿ ವಿತರಿಸಬೇಕು.ಯುವ ನಿಧಿಯಡಿ ಪದವಿ ಹಾಗೂ ಡಿಡ್ಲೋಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕ ಯುವತಿಯರು ಪೋರ್ಟಲ್ ನಲ್ಲಿ ನೋಂದಾಯಿಸಲು ವ್ಯಾಪಕ ಪ್ರಚಾರ ಮಾಡಬೇಕೆಂದು ತಿಳಿಸಿದರು.ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.