ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರ ಮನವಿಗೆ ಸ್ಪಂದಿಸಿದ ರಾಯಬಾಗ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಅವರು ತಾವು ನಿರ್ಮಿಸಿದ ಗ್ರಂಥಾಲಯಕ್ಕೆ `ಗೃಹಲಕ್ಷ್ಮಿ’ ಎಂದು ಹೆಸರಿಟ್ಟಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ರಾಜ್ಯದ ಜನರ ಮನ ಗೆದ್ದಿರುವುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. ಮಲ್ಲವ್ವ ಮೇಟಿ ಅವರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದ ಸಚಿವರು, ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ `ಕಾನೂರು ಹೆಗ್ಗಡತಿ’ ಎಂಬ ಪುಸ್ತಕವನ್ನು ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.
ಕಳೆದ ಒಂದು ವರ್ಷದ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಕೂಡಿಟ್ಟಿದ್ದ ಮಲ್ಲವ್ವ ಮೇಟಿ, ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಗ್ರಂಥಾಲಯವನ್ನು ನಿರ್ಮಿಸಿದ್ದರು. ಮಲ್ಲವ್ವ ಮೇಟಿ ಕಾರ್ಯವನ್ನು ಮೆಚ್ಚಿದ್ದ ಸಚಿವರು, ಗ್ರಂಥಾಲಯಕ್ಕೆ ಗೃಹಲಕ್ಷ್ಮಿ ಗ್ರಂಥಾಲಯ ಎಂದು ಹೆಸರಿಡಬೇಕು ಎಂದು ಮನವಿ ಮಾಡಿದ್ದರು.