ರಾಮನಗರ: ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಕೇಳಿ ಪಡೆಯುವಂತಹ ವಾತಾವರಣ ನಿರ್ಮಾಣವಾಗಬೇಕೆಂದು ಮಾರ್ಗದರ್ಶಿ ಅಧಿಕಾರಿಯಾಗಿ ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಪ್ರಮೋದ್ಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಮಕ್ಕಳ ಹಾಗೂ ವಿಶೇಷಚೇತನರ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳ ಅಧ್ಯಕ್ಷತೆಯ ಲ್ಲಿಯೇ ಮಕ್ಕಳಿಗಾಗಿಯೇ ನಡೆಸುತ್ತಿರುವ ಗ್ರಾಮ ಸಭೆಯಲ್ಲಿ ಮಕ್ಕಳು ತಮಗಿರುವ ಸಮಸ್ಯೆಗಳ ಬಗ್ಗೆ ನಿರ್ಬಿತಿಯಿಂದ ಮುಕ್ತವಾಗಿ ತಿಳಿಸುವಂತೆ ಮಕ್ಕಳಲ್ಲಿ ಮನವಿ ಮಾಡಿದ ಅವರು ಮಕ್ಕಳ ಹಕ್ಕುಗಳ ರಕ್ಷಣೆ-ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದರು.
ಮಕ್ಕಳ ಮತ್ತು ವಿಕಲಚೇತನರ ಹಕ್ಕುಗಳ ಬಗ್ಗೆ ಮಾಹಿತಿ ಮತ್ತು ಅನುಷ್ಠಾನದ ಬಗ್ಗೆ ತಿಳಿಸಿದ ಅವರು ಸಮಗ್ರ ಅಭಿವೃದ್ದಿಗಾಗಿ ಗ್ರಾಪಂ ನಲ್ಲಿ ಸಿಗುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ 2009 ರ ಹಕ್ಕು ಕಾಯ್ದೆ ಮತ್ತು 2013 ರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಗಳ ಮಹತ್ವದ ಬಗ್ಗೆ ತಿಳಿಸಿದ ಅವರು ಇದೇ ವೇಳೆ ಅಹವಾಲುಗಳನ್ನು ಸ್ವೀಕರಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಎಂ.ರಾಜೇಗೌಡ ಮಾತನಾಡಿ ಸರ್ಕಾರದ ಸುತ್ತೋಲೆ ಯಂತೆ ಪ್ರತಿವರ್ಷ ಗ್ರಾಪಂ ವತಿಯಿಂದ ವಿಶೇಷ ಗ್ರಾಮ ಸಭೆಗಳನ್ನು ನಡೆಸುತ್ತಿದ್ದು, ಮಕ್ಕಳು ಬಾಲ್ಯದಿಂದಲೇ ಸಾಮಾಜಿಕ ವಿಷಯಗಳು ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಹಕಾರಿಯಾಗಲಿದೆ. ಅಷ್ಟೆ ಅಲ್ಲದೆ ಮಕ್ಕಳಲ್ಲಿ ಆತ್ಮಸ್ಥೈರ್ಯ ವೃದ್ದಿಯಾಗಲು ಗ್ರಾಮಸಭೆಗಳು ಪೂರಕವಾಗಿವೆ.
ಇದರ ಜೊತೆಗೆ ವಿಶೇಷಚೇತನರಿಗೆ ಸರ್ಕಾರದಿಂದ ಬರುವ ಅನುದಾನದಲ್ಲಿ ಶೇ 5% ರಷ್ಟು ಮೀಸಲಿರಿಸಿದ್ದು, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತಿದೆ. ಎಲ್ಲರೂ ಸಹ ಇಂತಹ ಸಭೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಪಡೆಯಿರಿ ಎಂದು ಮನವಿ ಮಾಡಿದರು.
ಕು.ಪುಣ್ಯಶ್ರೀ ಮತ್ತು ಚೇತನ್ಗೌಡ ಅವರುಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಕೆ.ಎನ್, ಉಪಾದ್ಯಕೆ ಜಯಮ್ಮ, ಸದಸ್ಯರಾದ ನರಸಿಂಹಮೂರ್ತಿ, ಕೃಷ್ಣೇಗೌಡ, ಮಂಜುನಾಥ್, ಸತ್ಯನಾರಾಯಣ್, ನಂದಕುಮಾರ್, ಶೋಭಾ, ಗೌರಮ್ಮ, ನಾಗರತ್ನಮ್ಮ, ಗೋವಿಂದರಾಜು ಸೇರಿದಂತೆ ಶಾಲಾ ಮಕ್ಕಳು, ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.