ದೇವನಹಳ್ಳಿ : ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ನಾಗರೀಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುತ್ತದೆ, ಅದೇ ರೀತಿ ಪಂಚಾಯ್ತಿ ವ್ಯಾಪ್ತಿಯ ಮಹಿಳೆಯರು ಮತ್ತು ಮಕ್ಕಳು ತಮ್ಮ ಗ್ರಾಮಗಳ, ಶಾಲೆಗಳ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಕ್ಕಳ ಮತ್ತು ಮಹಿಳೆಯರ ಗ್ರಾಮ ಸಭೆ ಸಹಕಾರಿಯಾಗಲಿದೆ ಎಂದು ಆವತಿ ಗ್ರಾ.ಪಂ. ಸದಸ್ಯ ಅತ್ತಿಬೆಲೆ ನರಸಪ್ಪ ತಿಳಿಸಿದರು.
ಅವರು ಕುರುಬರಕುಂಟೆ-ಜನತಾಕಾಲೋನಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಮತ್ತು ಮಹಿಳೆಯರ ಗ್ರಾಮಸಭೆಯಲ್ಲಿ ಮಾತನಾಡಿ ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಲ್ಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಕವಾಗಿರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾದ್ದು ಶಿಕ್ಷಕರು, ಪೋಷಕರು, ಅಷ್ಟೇ ಅಲ್ಲ, ಸಮಾಜದ ಕರ್ತವ್ಯವೂ ಸಹ ಆಗಿರುತ್ತದೆ ನಿಮ್ಮ ತಂದೆ ತಾಯಿಯರು ಕೂಲಿ ಮಾಡಿ ನಿಮ್ಮನ್ನು ಶಾಲೆಗೆ ಕಳುಹಿಸುತ್ತಾರೆ ಉನ್ನತ ವ್ಯಾಸಂಗ ಮಾಡಿ ಅವರಿಗೆ, ನಿಮ್ಮ ಗ್ರಾಮಕ್ಕೆ ಹೆಸರು ಬರುವಂತೆ ಮಾಡಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ರಾಜಮ್ಮ ಮಾತನಾಡಿ ಕಿರಿ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ನಿರಂತರ ಲೈಂಗಿಕ ಶೋಷಣೆ ನಡೆಯುತ್ತಿದ್ದು ಎಷ್ಟೋ ಹೆಣ್ಣು ಮಕ್ಕಳು ಪೋಷಕರಿಗೆ ತಿಳಿಸುವುದೇ ಇಲ್ಲ, ಬಯಪಡದೇ ಮನೆಯವರಿಗೆ ತಿಳಿಸಿ, ಯಾವುದೇ ವ್ಯಕ್ತಿ, ಉಪಾಧ್ಯಾಯರಾಗಲಿ ನಿಮ್ಮನ್ನು ಮುಟ್ಟಿ ಕೆಟ್ಟದ್ದಾಗಿ ವರ್ತಿಸಿದರೆ ನಿಮ್ಮ ತಂದೆ ತಾಯಿಯರಿಗಾಗಲಿ, ಶಾಲಾ ಉಪಾಧ್ಯಾಯನಿಯರಲ್ಲಿ ತಿಳಿಸಿ ಯಾವುದೇ ಬಯಪಡಬೇಡಿ ಅಂತಹವರ ವಿರುದ್ದ ಕಾನೂನು ರಿತ್ಯ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹಲವಾರು ವಿಚಾರಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿ ತಿಳಿಸಿಕೊಟ್ಟರು.
ಶಿಕ್ಷಣ ಇಲಾಖೆಯ ಸಿ.ಆರ್.ಪಿ ಜಂಯತಿ ಮಾತನಾಡಿ ಗ್ರಾಮೀಣ ಭಾಗದ ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ, ಸರ್ಕಾರಿ ಶಾಲೆಯಲ್ಲಿ ಪರಿಣತಿ ಪಡೆದ ಶಿಕ್ಷಕರು ಕೆಲಸ ಮಾಡುತ್ತಿರುತ್ತಾರೆ, ಖಾಸಗಿ ಶಾಲೆ ನೋಡಲು ಅಂದವಷ್ಠೆ, ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳೇ ಮೇಲುಗೈ ಸಾದಿಸುತ್ತಿವೆ, ಆದರೆ ಕೆಲವು ಶಾಲೆಗಳು ಶಿಥಿಲವಾಗಿದ್ದು ಅವುಗಳನ್ನು ನವೀಕರಿಸಬೇಕಿದೆ ಆವತಿ ಗ್ರಾಮ ಪಂಚಾಯ್ತಿ ಶಾಲೆಗಳ ಬಗ್ಗೆ ಹೆಚ್ಚು ಗಮನಹರಿಸಿ ಪಂಚಾಯ್ತಿಯಿಂದ ಸಿಗುವ ಅನೇಕ ಸವಲತ್ತುಗಳನ್ನು ಒದಗಿಸಿದ್ದಾರೆ ಎಂದರು.
ಆವತಿ ಗ್ರಾ.ಪಂ. ವ್ಯಾಪ್ತಿಯ ಸರ್ಕಾರಿ ಶಾಲೆಗಳ ಶಿಕ್ಷಕಿಯರು ತಮ್ಮ ಶಾಲೆಗಳ ಸಮಸ್ಯೆಗಳ ಬಗ್ಗೆ ತಿಳಿಸಿದರು, ಅವುಗಳನ್ನು ಪಂಚಾಯ್ತಿ ಮಟ್ಟದಲ್ಲಿ ಬಗೆಹರಿಸುವುದಾಗಿದ್ದರೆ ಪ್ರಯತ್ನ ಮಾಡುತ್ತೇವೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ.ಡಿ. ಇಸಾಕ್ ತಿಳಿಸಿದರು.
ಇದೇ ಸಮಯದಲ್ಲಿ ಆವತಿ ಗ್ರಾ.ಪಂ. ವತಿಯಿಂದ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಉಪಕರಣಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ಆವತಿ ಗ್ರಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ ಮುನಿರಾಜು, ಉಪಾಧ್ಯಕ್ಷೆ ಸೌಭಾಗ್ಯ ಮುನಿತಿಮ್ಮರಾಯಪ್ಪ, ಸದ್ಯಸರಾದ ನರಸಪ್ಪ, ಎಂ.ಪ್ರೇಮನಾಗರಾಜ್, ಎನ್.ಉಮೇಶ, ಎಂ.ವಿಶ್ವನಾಥ್ ಟಿ.ಮಾಲಾ ಆಂಜಿನಪ್ಪ, ಕೆ.ಆರ್.ನರಸಿಂಹಮೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜಮ್ಮ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಜಂಯತಿ ಪಂಚಾಯತಿ ಅಭಿವೃದ್ದಿ ಅಧಿಕಾರಿ ಎಸ್.ಎಂ.ಡಿ ಇಸಾಕ್ ಕಾರ್ಯದರ್ಶಿ ರಾಘವೇಂದ್ರ ಜಿ.ಎನ್, ಶಾಲಾಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು ಪಂಚಾಯತಿ ಸಿಬಂದಿ ವರ್ಗ ಹಾಜರಿದ್ದರು.