ಮಧುಗಿರಿ: ಸುಮಾರು ಹತ್ತಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮಸ್ಥರ ಹೆಸರಲ್ಲಿ ಸಾಲ ಪಡೆದು, ಪಡೆದ ಸಾಲವನ್ನು ಮರು ಪಾವತಿಸದೆ ಹಣದ ಸಮೇತ ದಂಪತಿ ಪರಾರಿಯಾಗಿದ್ದಾರೆ.
ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಪ್ರತಾಪ ಮತ್ತು ರತ್ನಮ್ಮ ಎಂಬ ದಂಪತಿ 35 ಮಂದಿಯ ಆಧಾರ್ ಕಾರ್ಡ್, ಇತರೆ ದಾಖಲೆ ಪಡೆದು, 10 ಮೈಕ್ರೋ ಫೈನಾನ್ಸ್ ಕಂಪನಿಗಳಿಂದ 45 ರಿಂದ 50 ಲಕ್ಷದವರೆಗೆ ಸಾಲ ಮಂಜೂರು ಮಾಡಿಸಿ, ತಾವೇ ಆ ಹಣ ಪಡೆದು, ನಾವೇ ಸಾಲದ ಹಣ ಕಟ್ಟಿಕೊಂಡು ಹೋಗುತ್ತವೆಂದು ನಂಬಿಸಿ, ವಂಚಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದೀಗ ಫೈನಾನ್ಸ್ ಕಂಪನಿಗಳು ಸಾಲ ಮರು ಪಾವತಿಗೆ ಗ್ರಾಮಸ್ಥರಿಗೆ ನೋಟಿಸ್ ಜಾರಿ ಮಾಡಿವೆ. ಫೈನಾನ್ಸ್ ಸಿಬ್ಬಂದಿ ಪ್ರತಿದಿನ ಮನೆಗಳ ಮುಂದೆ ಬಂದು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆಂದು ಗ್ರಾಮಸ್ಥರು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಜ.17ರಂದು ದೂರು ನೀಡಿದ್ದು, ಆದರೆ ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ವಂಚನೆಗೊಳಗಾದ ಮಹಿಳೆಯರು ನ್ಯಾಯ ನೀಡುವಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿಯನ್ನು ಹಿಡಿದು ಮಾಧ್ಯಮಗಳಿಗೆ ನ್ಯಾಯಕ್ಕಾಗಿ ಮನವಿ ಮಾಡಿದರು.