ಮಾಗಡಿ: ಗ್ರಾಮೀಣ ಭಾಗದ ರೈತರು ಯುವಕರು ಆರ್ಥಿಕವಾಗಿ ಸಬಲರಾಗ ಬೇಕಾದರೆ ಸ್ವಂತ ಉದ್ಯೋಗದತ್ತ ಮುಖ ಮಾಡಬೇಕು ಎಂದು ಬಮೂಲ್ ನಿರ್ದೇಶಕರಾದ ಆಗಲಕೋಟೆ ನರಸಿಂಹಮೂರ್ತಿ ಹೇಳಿದರು.
ತಾಲ್ಲೂಕಿನ ಆಗಲಕೋಟೆ ಕೃಷಿಪತ್ತಿನ ಸಹಕಾರಿ ಸಂಘದ 2023 24 ನೇ ಸಾಲಿನ ಸದಸ್ಯರ ವಾರ್ಷಿಕ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ರೈತರ ಮಕ್ಕಳು ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗವನ್ನರಸಿ ಪಟ್ಟಣ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಇಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಶತಪ್ರಯತ್ನ ಮಾಡಿದರೂ ಸಹ ಜೀವನ ಅಳವಡಿಕೆ ಅಸಾಧ್ಯ.
ಉದ್ಯೋಗವನ್ನರಸಿ ರಾಜಧಾನಿಗೆ ಹೋಗುವ ಬದಲಿಗೆ ಇರುವಲ್ಲಿಯೇ ಸಹಕಾರಿ ಬ್ಯಾಂಕುಗಳಲ್ಲಿ ಕುರಿ, ಕೋಳಿ, ಮೇಕೆ, ಹೈನುಗಾರಿಕೆ ಸೇರಿದಂತೆ ಇನ್ನಿತರೆ ವ್ಯವಹಾರಗಳಿಗೆ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ ಸಬ್ಸಿಡಿ ಧರದಲ್ಲಿ ಸಾಲ ಸೌಲಭ್ಯಗಳು ದೊರೆಯುತ್ತವೆ. ಇದನ್ನು ಸದ್ಬಳಕೆ ಮಾಡಿಕೊಂಡು ರೈತರು ಯುವಕರು ಆರ್ಥಿಕವಾಗಿ ಸಬಲರಾಗುವ ಜೊತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.
ಸಂಘದ ಅದ್ಯಕ್ಷ ಪಿ.ಎನ್.ಸತೀಶ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸಂಘವು 6.78 ಲಕ್ಷ ಲಾಭ ಗಳಿಸಿದೆ.ಸಂಘದಲ್ಲಿ 920 ಮಂದಿ ಸದಸ್ಯರಿಗೆ 7:27 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ರೈತರು ಪಡೆದಿರುವ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಘದ ಏಳಿಗೆಗೆ ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಕಾರ್ಯ ನಿರ್ವಹಾ ಣಾಧಿಕಾರಿ ನರಸಿಂಹಯ್ಯ, ಉಪಾದ್ಯಕ್ಷ ಚಿಕ್ಕಮಾದಯ್ಯ, ನಿರ್ದೇಶಕರಾದ ಎಂ.ಸಿದ್ದಯ್ಯ, ರಾಮಯ್ಯ, ಬೋರೇಗೌಡ, ಚಿಕ್ಕಸ್ವಾಮಯ್ಯ, ಗಂಗಯ್ಯ, ಗಂಗಬೋರಯ್ಯ, ಭಾಗ್ಯಮ್ಮ, ಲಿಂಗಮ್ಮ ಸೇರಿದಂತೆ ಮತ್ತಿತರಿದ್ದರು.