ಹೊಸಕೋಟೆ: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕಾದ್ದು ಅತ್ಯವಶ್ಯವಾಗಿದೆ ಎಂದು ನಗರದ ಮಾನವ ಸಾರಥಿ ಟ್ರಸ್ಟ್ನ ಮುಖ್ಯಸ್ಥೆ ಶಾಂಭವಿ ಗೌಡ ಹೇಳಿದರು.ಅವರು ತಾಲೂಕಿನ ಶಿವನಾಪುರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನಾ ಸಹಯೋಗದಲ್ಲಿ ಪ್ರೇರಣಾ ಯೋಜನೆಯಡಿ ಉಚಿತ ನೋಟ್ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಕಳೆದ ೪ ವರ್ಷಗಳಿಂದ ಸಂಸ್ಥೆಯು ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ, ಲೇಖನಸಾಮಗ್ರಿಗಳನ್ನು ವಿತರಿಸುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಎರಡು ಸಾವಿರ ನೋಟ್ಪುಸ್ತಕಗಳನ್ನು ನೀಡಲಾಗುತ್ತಿದೆ.ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರ ಕನಸನ್ನು ನನಸಾಗಿಸಲು ಶ್ರಮಿಸಬೇಕು.
ಇದರಿಂದ ಸಂಘ ಸಂಸ್ಥೆಗಳ ಪ್ರೋತ್ಸಾಹವು ಸಾರ್ಥಕವಾಗಲಿದೆ.ಸಂಸ್ಥೆಯು ಅನಾಥ ಮಕ್ಕಳಿಗೆ ಆಶ್ರಯ ನೀಡುವುದರೊಂದಿಗೆ ಅವರ ಕಲಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸರಕಾರಿ ಶಾಲೆಗಳಿಗೆ ದಾಖಲಿಸಲಾಗುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಶಿಬಿರ, ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ, ಕನ್ನಡಕಗಳನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.ಮಾನವ ಸಾರಥಿ ಟ್ರಸ್ಟಿನ ನಿರ್ವಾಹಕಿ ಲಕ್ಷ್ಮೀ ಹೆಬ್ಬಾಳ್, ಶಾಲಾ ಶಿಕ್ಷಕರು ಹಾಜರಿದ್ದರು.