ಗುಂಡ್ಲುಪೇಟೆ: ಕಂದಾಯ ಇಲಾಖೆಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ತಾಲ್ಲೂಕು ಕಚೇರಿ ಆವರಣದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ನಂತರ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಪಿ ಮಹದೇವಪ್ಪ ಮಾತನಾಡಿ ಬೇರೆ ಇಲಾಖೆಗಳಲ್ಲಿ ಇರುವಂತೆ ಕಂದಾಯ ಇಲಾಖೆಯಲ್ಲೂ ವರ್ಗಾವಣೆ ನೀತಿ ಜಾರಿಗೆ ತರಲು ಮಾರ್ಗಸೂಚಿ ರೂಪಿಸಬೇಕು. ಸುಸಜ್ಜಿತ ಕಚೇರಿ ಸೇರಿ ಮೂಲಸೌಕರ್ಯ ಒದಗಿಸಬೇಕು. ಜೀವ ಹಾನಿಯಾಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಪ್ರಯಾಣ ಭತ್ಯೆ ಹೆಚ್ಚಿಸಬೇಕು. ಗ್ರಾಮಾಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳು ಆಗ್ರಹಿಸಿದ್ದಾರೆ.
ಇಲಾಖೆಗೆ ಅಗತ್ಯ ಇರುವ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ಗಳನ್ನು ಒದಗಿಸಬೇಕು. ಮೊಬೈಲ್ ಆ?ಯಪ್ ಮೂಲಕ ಕೆಲಸ ಮಾಡಿ ಎನ್ನುತ್ತಾರೆ. ಆದರೆ, ಮೊಬೈಲ್ ಫೋನ್ ನೀಡುತ್ತಿಲ್ಲ, ಸ್ವಂತ ಮೊಬೈಲ್ ಫೋನ್ಗಳ ಮೂಲಕ ಇಲಾಖೆಯ ಕೆಲಸ ಮಾಡಲಾಗುತ್ತಿದೆ. 5 ವರ್ಷದಿಂದ ಬಡ್ತಿ ನೀಡುತ್ತಿಲ್ಲ ಎಂದು ದೂರಿದರು. ನೌಕರರ ಸಂಘದ ತಾ. ಅಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ ಕಳೆದ ನಾಲ್ಕು ತಿಂಗಳ ಹಿಂದೆ ಅನೇಕ ಬೇಡಿಕೆ ಈಡೇರಿಸುವಂತೆ ಧರಣಿ ನಡೆಸಲಾಗಿತ್ತು.
ಬೇಡಿಕೆ ಈಡೇರಿಸದ ಕಾರಣ ಈಗ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ರಾಜ್ಯ ಸಂಘದ ನಿರ್ಣಯದಂತೆ ಮುಂದಿನ ಒಂದು ತಿಂಗಳ ಕಾಲ ಸಾಮೂಹಿಕ ರಜೆಯನ್ನು ಹಾಕಲು ತೀರ್ಮಾನಿಸಿದ್ದು ಸಂಜೆ ವರೆಗೂ ಸಂಘದ ನಿರ್ಣಯದ ಪತ್ರಕ್ಕೆ ಕಾಯುತ್ತಿದ್ದೇವೆ ಎಂದರು.ಈ ಮೌನ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಉಲ್ಲಾಸ್, ಕಾರ್ಯದರ್ಶಿ ನದೀಮ್ ಹುಸೇನ್, ಖಜಾಂಚಿ ನಿತಿನ್ ಗೌಡ, ನಿರ್ದೇಶಕರಾದ ಮಹದೇವಪ್ಪ, ಭಗವಂತರಾಯ್, ದೇವಪ್ಪ ಪೂಜಾರಿ, ಸಂತೋಷ್, ವಿಜಯಲಕ್ಷ್ಮಿ, ವಿನಯ್ ಅನಿತಾ ರಾಣಿ, ದಾಕ್ಷಾಯಿಣಿ, ಪೂಜಾ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು ಭಾಗಿಯಾಗಿದ್ದರು.