ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 17 ಕೇಂದ್ರಗಳು, ಗೌರಿಬಿದನೂರು ತಾಲ್ಲೂಕಿನಲ್ಲಿ 4 ಕೇಂದ್ರಗಳು ಒಟ್ಟು 21 ಕೇಂದ್ರ ಸ್ಥಾನದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 29 ಹಾಗೂ ಅಕ್ಟೋಬರ್ 27 ರಂದು ನಡೆಯುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಲೋಪದೋಷವಾಗದಂತೆ ಸುಮಗವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ನೇಮಿಸಲ್ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚಿಕ್ಕಬಳ್ಳಾಪುರ ಜಿಲ್ಲೆ ಕೇಂದ್ರ ಸ್ಥಾನದಲ್ಲಿ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಒಟ್ಟು 10,053 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ವಿಕಲಚೇತನರಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಬೇಕು. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಬೆಳಕು, ಕುಡಿಯುವ ನೀರು, ಕೊಠಡಿಗಳ ಸ್ವಚ್ಚತೆ, ಗಾಳಿಯ ವ್ಯವಸ್ಥೆ, ಶೌಚಾಲಯ, ಸುಸ್ಥಿಯಲ್ಲಿರುವ ಗಡಿಯಾರ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿರುವ ಕೇಂದ್ರಗಳಿಗೆ ನೇಮಿಸಲ್ಪಟ್ಟ ಅಧಿಕಾರಿಗಳು ಸಿ.ಸಿ ಕ್ಯಾಮರಾ, ವಿದ್ಯುತ್ ಸಂಪರ್ಕ, ಡೆಸ್ಕ್ ಗಳು ಸುಸ್ಥಿತಿಯಲ್ಲಿರುವಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು.
ಪರೀಕ್ಷಾ ದಿನದಂದು ಸಂವೀಕ್ಷಕರಿಗೆ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಉತ್ತರ ಹಾಳೆಗಳು ವಿತರಣೆಯಾಗಿರುವುದನ್ನು ಖಾತರಿ ಪಡಿಸಿಕೊಳ್ಳವುದು ಹಾಗೂ ಆಯೋಗವು ನೀಡಲಾದ ಪರೀಕ್ಷೆಗೆ ಸಂಬಂಧಿಸಿದ ವೇಳೆ ಹಾಗೂ ನಿರ್ದೇಶನಗಳನ್ನು ನಿಖರವಾಗಿ ಪಾಲಿಸಬೇಕು. ಪರೀಕ್ಷೆಯನ್ನು ಗೌಪ್ಯತೆಯಿಂದಲೂ, ನಿಯಮಬದ್ಧವಾದ ನಿರ್ವಹಣೆಯಿಂದಲೂ ಕೈಗೊಂಡು ಪರೀಕ್ಷಾ ದಕ್ಷತೆಯನ್ನು ಕಾಪಾಡಬೇಕು ಎಂದರು.
ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳ ತಂಡದ ಬೆಂಗಾವಲಿಗೆ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಪರೀಕ್ಷಾ ಕೇಂದ್ರ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತವಾಗಬೇಕು. ಪರೀಕ್ಷಾ ಕೇಂದ್ರ ಸುತ್ತ-ಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಕ್ರಮವಹಿಸಬೇಕು. ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಫ್ರಿಸ್ಕಿಂಗ್ ಮಾಡಿಸತಕ್ಕದ್ದು ಹಾಗೂ ಪರೀಕ್ಷಾರ್ಥಿಗಳು ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗದಂತೆ ಸೂಚಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ಮಂಜುನಾಥ್, ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಪರೀಕ್ಷಾ ಕೇಂದ್ರಗಳ ಸಂಬಂಧಿಸಿದ ಶಾಲಾ, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.