ಚಿತ್ರರಂಗದಲ್ಲಿ ನಾಯಕನಿಗೆ ಇರುವಷ್ಟೇ ಖದರ್ ಖಳನಾಯಕನಿಗೂ ಇರುತ್ತದೆ. ಇಬ್ಬರಿಂದಲೇ ಕಥೆ ಸಾಗುತ್ತದೆ. ಈ ಹಿನ್ನಲೆಯಲ್ಲಿ ಗತಕಾಲದಿಂದಲೂ ವಿಲನ್ಗಳಿಗೆ ಬೇಡಿಕೆ ಇದೆ. ಬಾಲಕೃಷ್ಣ, ತೂಗದೀಪಶ್ರೀನಿವಾಸ್, ವಜ್ರಮುನಿ, ಧೀರೇಂದ್ರಗೋಪಾಲ್ ಮುಂತಾದವರು ಇಂತಹುದೆ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಕಟ್ ಮಾಡಿದರೆ ಸದ್ಯ ಸ್ಪುರದ್ರೂಪಿ `ಸೂರ್ಯ ಪ್ರವೀಣ್’ ಖಳನಟನಾಗಿ ಗುರುತಿಸಿಕೊಂಡು ಹಿರಿತೆರೆ, ಕಿರುತೆರೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಾ ಉತ್ತುಂಗಕ್ಕೆ ಹೋಗುತ್ತಿದ್ದಾರೆ. ಮೈಸೂರು ಮೂಲದವರಾಗಿದ್ದು, ಬಣ್ಣದ ಲೋಕಕ್ಕೆ ಬರುತ್ತೆನೆಂಬ ಆಸೆ ಇರಲಿಲ್ಲ.
ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ, ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್ ಸಿನಿಮಾಗಳನ್ನು ನೋಡುತ್ತಾ, ತಾನು ಕಲಾವಿದ ಆಗಬೇಕೆಂಬ ಸಣ್ಣದೊಂದು ಬಯಕೆ ಚಿಗುರಿದೆ. ಇದೇ ಸಮಯದಲ್ಲಿ ಗೆಳಯನ ಶಿಪಾರಸ್ಸಿನಿಂದ ನಿರ್ದೇಶಕ ನಾಗಣ್ಣ ಅವರನ್ನು ಭೇಟಿಯಾದಾಗ, ಪ್ರಥಮ ಪ್ರಯತ್ನದಲ್ಲೇ ಬಂಪರ್ ಲಾಟರಿ ಹೊಡೆಯಿತು ಎನ್ನುವ ಹಾಗೆ `ಸಂಗೋಳ್ಳಿ ರಾಯಣ್ಣ’ ಚಿತ್ರದಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹಿತನಾಗಿ ಸುಮಾರು 45 ದಿನ ಕೆಲಸ ಮಾಡಿದ್ದಾರೆ.
ಭವಿಷ್ಯದಲ್ಲಿ ನಟನೆಯಲ್ಲೆ ಪಕ್ವವಾಗಬೇಕೆಂದು `ಕಲಾಭೂಮಿ’ ಮತ್ತು `ಆದರ್ಶ ಫಿಲಿಂ ಇನ್ಸಿಟ್ಯೂಟ್’ದಲ್ಲಿ ತರಭೇತಿ ಪಡೆದುಕೊಂಡಿದ್ದಾರೆ. ಮನೆಯಿಂದಲೂ ಪ್ರೋತ್ಸಾಹ ಸಿಕ್ಕಿದ್ದರಿಂದ ಇದನ್ನೆ ವೃತ್ತಿಯನ್ನಾಗಿ ತೆಗೆದುಕೊಂಡಿದ್ದಾರೆ.`ಕಾದಂಬರಿ ಕಣಜ’, `ಮಂಗಳಗೌರಿ ಮದುವೆ’, `ಹರಹರ ಮಹದೇವ’, `ಗೀತಾ’ ಹಾಗೂ ತೆಲುಗು ಸೀರಿಯಲ್. ಹೀಗೆ 60 ಧಾರವಾಹಿಗಳು, 2500 ಕಂತುಗಳಲ್ಲಿ ಖಳನಾಗಿ ಕಾಣಿಸಿಕೊಂಡು ಎಲ್ಲರ ಮನೆ ಮಾತಾಗಿದ್ದಾರೆ. `ಅವನೇ ಶ್ರೀಮನ್ನಾರಾಯಣ’ `ಆಪರೇಶನ್ ಅಲಮೇಲಮ್ಮ’, `ಯಜಮಾನ’, `ಬಾನದಾರಿಯಲ್ಲಿ’ ಸೇರಿದಂತೆ ಹನ್ನರೆಡು ವರ್ಷದ ಪಯಣದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಮುಂದೆಯೂ ನಕರಾತ್ಮಕ ಪಾತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಇದೆ. ನಾಯಕನಾಗಿ ಆಫರ್ ಬಂದರೂ, ಅದರಲ್ಲೂ ನೆಗಟೀವ್ದಿಂದ ಪಾಸಟೀವ್ ಇರುವಂತಹ ರೋಲ್ ಸಿಕ್ಕರೆ ಖುಷಿಯಾಗುತ್ತದೆ ಎನ್ನುತ್ತಾರೆ ಸೂರ್ಯ ಪ್ರವೀಣ್. `45′ ಸಿನಿಮಾದಲ್ಲಿ ಮೂವರು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದು ಮರೆಯಲಾಗದ ಅನುಭವವಂತೆ. ಪ್ರಿಯಾಂಕಉಪೇಂದ್ರ ಅಭಿನಯದ `ಉಗ್ರಾವತಾರ’ ಉಳಿದಂತೆ `ದಿಲ್ಖುಷ್’, `ಕೆಡಿ’ ಇನ್ನು ಐದು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.