ಆಕ್ಷನ್ ಕ್ವೀನ್ ಪ್ರಿಯಾಂಕ ಉಪೇಂದ್ರ ಸಹೋದರ ವಿನಾಯಕ್ `ಯುಐ’ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಾಗಂತ ಇವರಿಗೆ ಬಣ್ಣದ ಲೋಕ ಹೊಸದೇನಲ್ಲ. ಈಗಾಗಲೇ ಬೆಂಗಾಲಿ ಭಾಷೆಯ 21 ಚಿತ್ರಗಳಲ್ಲಿ ವಿವೇಕ್ ತ್ರಿವೇದಿ ಹೆಸರಿನಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ತಾಯಿ ಸಮೀರಾ ಒಂದು ಕಾಲದಲ್ಲಿ ನಾಯಕಿ ಆಗಿದ್ದವರು. ಅಕ್ಕ ಪ್ರಿಯಾಂಕಉಪೇಂದ್ರ ಬೆಂಗಾಲಿ ಸೇರಿದಂತೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಚಿತ್ರಗಳಲ್ಲಿ ಗುರುತಿಸಿಕೊಂಡು, ಚಂದನವನದಲ್ಲಿ 50ನೇ ಸಿನಿಮಾ `ಡಿಟೆಕ್ಟೀವ್ ತೀಕ್ಷ್ಣ’ದಲ್ಲಿ ತನಿಖಾಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದೊಡ್ಡಮ್ಮನ ಮಗಳು ಜೂನ್ಮಲ್ಲಿಹ ಸಹ ನಟಿಯಾಗಿದ್ದು, ಸದ್ಯ ರಾಜಕೀಯಕ್ಕೆ ಪ್ರವೇಶಿಸಿ ವೆಸ್ಟ್ಬೆಂಗಾಲ್ ಲೋಕಸಭಾ ಸದಸ್ಯೆಯಾಗಿದ್ದಾರೆ. ಮೂವರ ಬಳುವಳಿಯಿಂದಲೇ ಇವರು ಸಿನಿಮಾ ರಂಗಕ್ಕೆ ಬರಲು ಸುಲಭವಾಗಿದೆ.
ಬಾವ ರಿಯಲ್ ಸ್ಟಾರ್ ಉಪೇಂದ್ರ `ಯುಐ’ದಲ್ಲಿ ಮುಸ್ಲಿಂ ಖಳನ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಕುರಿತಂತೆ ಮಾತನಾಡಿರುವ ಅವರು ನಾಲ್ಕು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಮರೆಯಲಾಗದ ಅನುಭವ. ಮನೆಯಲ್ಲಿ ಸಂಬಂದಿಯಾದರೂ, ಸೆಟ್ನಲ್ಲಿ ನಿರ್ದೇಶಕರು.ಹೆಚ್ಚು ಮಾತನಾಡದೆ ಎಲ್ಲರಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದರು. ಅವರ ಡೆಡಿಕೇಶನ್ ನೋಡಿ ಖುಷಿಯಾಗಿದೆ. ಬೆಂಗಾಲ್, ಬೆಂಗಳೂರು ಶೂಟಿಂಗ್ ಅಂತ ಏನು ವ್ಯತ್ಯಾಸ ಕಂಡಿಲ್ಲ.
ಶಾರುಕ್ಖಾನ್ ಅಭಿನಯದ `ಬಾಜಿಗರ್’ ರಿಮೇಕ್ದಲ್ಲಿ ಹೀರೋ ಆಗಿ ಅಭಿನಯಿಸಿದ್ದು ಹಿಟ್ ಆಗಿತ್ತು. ಅಕ್ಕನೇ ನನಗೆ ರೋಲ್ ಮಾಡೆಲ್. ಪ್ರತಿಬಾರಿ ಇಲ್ಲಿಗೆ ಬಂದಾಗ ಆಕೆಯಿಂದ ಕನ್ನಡ ಕಲಿಯುತ್ತಿದ್ದೇನೆ. ಆಕ್ಷನ್ ಚಿತ್ರಗಳಲ್ಲಿ ನಟಿಸಲು ಒಲವು ಇದೆ. ಮೊನ್ನೆ ಸೆಲಬ್ರಿಟಿ ಷೋದಲ್ಲಿ ನನ್ನ ಪಾತ್ರವನ್ನು ಗುರುತಿಸಿ ಶುಭ ಹಾರೈಸಿದ್ದಾರೆ. ಮುಂದೆಯೂ ಒಳ್ಳೆ ಪಾತ್ರಗಳು ಸಿಗಬಹುದೆಂಬ ಭರವಸೆ ಇದೆ ಎನ್ನುತ್ತಾರೆ ವಿನಾಯಕ್.