ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ತೀವ್ರ ಕುತೂಹಲ ಮೂಡಿಸಿದೆ.ಈ ಕ್ಷೇತ್ರದಲ್ಲಿ ಎನ್ಡಿ ಮೈತ್ರಿ ಅಭ್ಯರ್ಥಿಗಳು ಪರಸ್ಪರ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ತೀವ್ರ ಬಿಕ್ಕಟ್ಟು ತಲೆದೋರಿದೆ.
ತಮ್ಮ ಪಕ್ಷದವರೇ ಆಗಿರುವ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಮಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿಸಬೇಕೆಂದು ಪಟ್ಟು ಹಿಡಿದಿದ್ದರೆ, ಇತ್ತ ಜೆಡಿಎಸ್ ಕ್ಷೇತ್ರವಾಗಿರುವ ಕಾರಣ ಇಲ್ಲಿ ಯಾರೇ ಅಭ್ಯರ್ಥಿಯಾದರೂ ಜೆಡಿಎಸ್ ಚಿಹ್ನೆಯಿಂದಲೇ ಸ್ಪರ್ಧಿಸಬೇಕು ಎಂದು ಜೆಡಿಎಸ್ ಮುಖಂಡರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಚನ್ನಪಟ್ಟಣದಲ್ಲಿ ಹೆಚ್. ಡಿ.ಕುಮಾರಸ್ವಾಮಿ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.ಒಂದು ಕಡೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಮೈತ್ರಿ ಧರ್ಮ ಪರಿಪಾಲನೆಗಾಗಿ ಜೆಡಿಎಸ್ಗೆ ಬಿಟ್ಟು ಕೊಡಲು ನಿರ್ಧರಿಸಿರುವ ಬಿಜೆಪಿ.ಅಭ್ಯರ್ಥಿ ಯಾರೇ ಆದ್ರೂ, ಜೆಡಿಎಸ್ನ ಚಿಹ್ನೆಯಡಿಯಲ್ಲಿಯೇ ಸ್ಫರ್ಧೆ ಮಾಡಬೇಕು ಎಂದು ಸೂಚಿಸಿರುವ ಬಿಜೆಪಿ ಹೈಕಮಾಂಡ್ ನಾಯಕರು ಅಭಿಪ್ರಾಯಕ್ಕೆ ಬಂದಿದ್ದರೆ ಮತ್ತೊಂದು ಕಡೆ ಶತಾಯಗತಾಯ ಸ್ಫರ್ಧೆ ಮಾಡಲೇಬೇಕೆಂದು ಸಿ.ಪಿ.ಯೋಗೇಶ್ವರ್ ನಿರ್ಧರಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಸ್ಫರ್ಧೆಗೆ ಈವರೆಗೂ ಹೆಚ್.ಡಿ. ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇಷ್ಟೆಲ್ಲದರ ಮಧ್ಯೆ ಹೆಚ್.ಡಿ. ಕುಮಾರಸ್ವಾಮಿ ಜೊತೆಗೆ ಮಾತುಕತೆ ಮಾಡಲು ಸಿ.ಪಿ ಯೋಗೇಶ್ವರ್ ಸಜ್ಜಾಗಿದ್ದಾರೆ. ಅಕ್ಟೋಬರ್ 18 ರ ರಾತ್ರಿಯೊಳಗೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಲು ಯೋಗೇಶ್ವರ್ ನಿರ್ಧಾರ ಮಾಡಿದ್ದಾರೆ.ಒಂದು ವೇಳೆ ಕುಮಾರಸ್ವಾಮಿ ಒಪ್ಪದೇ ಹೋದರೆ, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಿ.ಪಿ.ಯೋಗೇಶ್ವರ್ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ