ಬೆಂಗಳೂರು: ಡಿಸೆಂಬರ್ 9 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರು ಮತ್ತು ಅಧಿಕಾರಿಗಳಿಗೆ ಅನುಕೂಲಕ್ಕಾಗಿ ಬೆಳಗಾವಿ – ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚರಿಸಲಿದೆ.
ಇಂಡಿಗೋ ಏರ್ಲೈನ್ಸ್ ಡಿಸೆಂಬರ್ 9 ರಿಂದ 19 ರವರೆಗೆ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಏರ್ಬಸ್ A320 ವಿಮಾನ ಸಂಚರಿಸಲಿದೆ ಎಂದು ಘೋಷಿಸಿದೆ.
ವೇಳಾಪಟ್ಟಿಯ ಪ್ರಕಾರ, ಇಂಡಿಗೋ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಬೆಳಗ್ಗೆ 7 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತದೆ.
ನಂತರ ಅದೇ ವಿಮಾನ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 7:30 ಕ್ಕೆ ಹೊರಟು ಬೆಳಗ್ಗೆ 8:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಲುಪಲಿದೆ ಎಂದು ಇಂಡಿಗೋ ತಿಳಿಸಿದೆ.
ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅಧಿವೇಶನದ ಸಮಯದಲ್ಲಿ ಬೆಳಗಾವಿ ಮತ್ತು ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚಾರಕ್ಕೆ ಮನವಿ ಮಾಡಿದ್ದರು.