2023ರ ವಿಶ್ವಕಪ್ ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ವಿಶ್ವ ವಿಜಯಿಯನ್ನಾಗಿಸಿದ ನಾಯಕ ಪ್ಯಾಟ್ ಕಮಿನ್ಸ್ ಅವರು ಫೆ.19ರಿಂದ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವುದು ಅನುಮಾನವೇ? ಹೌದು ಎನ್ನುತ್ತಿದೆ ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳು.
ಪಾದದ ಗಾಯಕ್ಕೆ ತುತ್ತಾಗಿರುವ ಅವರು ಸ್ಕ್ಯಾನಿಂಗ್ಗೆ ಒಳಗಾಗಲಿದ್ದು. ಅದರ ವರದಿ ಬಂದ ಬಳಿಕವಷ್ಟೇ ಆಡುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿದುಬರುವುದಾಗಿ ಆಸೀಸ್ ಆಯ್ಕೆದಾರ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಮಾಹಿತಿ ನೀಡಿದ್ದಾರೆ.ಇತ್ತೀಚೆಗಷ್ಟೇ ಮುಗಿದ ಬಾರ್ಡರ್ ಗಾವಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋಲನುಭವಿಸಿತ್ತು. ಆದರೆ ಮುಂದಿನ ಪಂದ್ಯಗಳಲ್ಲಿ ತಂಡವನ್ನು ಅದ್ಬುತವಾಗಿ ಮುನ್ನಡೆಸಿದ ಪ್ಯಾಟ್ ಕಮಿನ್ಸ್ ಅಂತಿಮವಾಗಿ ಆಸ್ಟ್ರೇಲಿಯಾ 3-1 ಅಂತರದಿಂದ ಸರಣಿ ಜಯಿಸುವಂತೆ ಮಾಡಿದ್ದರು.
ಸವ್ಯಸಾಚಿಯಾಗಿರುವ ಅವರು ಬೌಲಿಂಗ್ ನಲ್ಲಿ 21.36 ಸರಾಸರಿಯಲ್ಲಿ 25 ವಿಕೆಟ್ ಕಬಳಿಸಿದ್ದರು. ಆಸ್ಚ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ್ದು ಅವರೇ. ಇನ್ನು ಬ್ಯಾಟಿಂಗ್ ನಲ್ಲಿ 19.87 ಸರಾಸರಿಯಲ್ಲಿ 159 ರನ್ ಗಳಿಸಿದ್ದರು. ನಾಯಕನಾಗಿ ತಾನೇ ಜವಾಬ್ದಾರಿ ತೆಗೆದುಕೊಂಡು ಆಟವಾಡಿದ್ದರು. ಅವರ ರಣತಂತ್ರದಿಂದಾಗಿ ಆಸ್ಟ್ರೇಲಿಯಾ ತಂಡ ಕಪ್ ಗೆದ್ದಿತ್ತು.