ಚಾಂಪಿಯನ್ಸ್ ಟ್ರೋಫಿಗಾಗಿ ಬಿಸಿಸಿಐ ಒಟ್ಟು 18 ಸದಸ್ಯರ ಭಾರತ ತಂಡವನ್ನು ಹೆಸರಿಸಿದೆ. ಈ ಹದಿನೆಂಟು ಸದಸ್ಯರಲ್ಲಿ 15 ಮಂದಿ ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಲಿದ್ದು, ಉಳಿದ ಮೂವರು ಆಟಗಾರರು ಪ್ರಯಾಣೇತರ ಬದಲಿ ಆಟಗಾರರ ಪಟ್ಟಿಯಲ್ಲಿರಲಿದ್ದಾರೆ. ಅಂದರೆ ಮೀಸಲು ಆಟಗಾರರಾಗಿ ಭಾರತದಲ್ಲೇ ಉಳಿದುಕೊಳ್ಳಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ಪರಿಷ್ಕೃತ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಹಿಂದೆ ಪ್ರಕಟಿಸಲಾಗಿದ್ದ 15 ಸದಸ್ಯರ ಈ ತಂಡದಿಂದ ಇಬ್ಬರನ್ನು ಕೈ ಬಿಡಲಾಗಿದೆ. ಇಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈ ಬಿಡಲು ಮುಖ್ಯ ಕಾರಣ ಫಿಟ್ನೆಸ್ ಸಮಸ್ಯೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಹಾಗೆಯೇ 15 ಸದಸ್ಯರ ಬಳಗದಲ್ಲಿದ್ದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಟ್ಟಿದ್ದು, ಅವರ ಬದಲಿಗೆ ವರುಣ್ ಚಕ್ರವರ್ತಿಗೆ ಸ್ಥಾನ ಕಲ್ಪಿಸಲಾಗಿದೆ. ಈ ಬದಲಾವಣೆಯಲ್ಲದೇ ಮೂವರನ್ನು ಮೀಸಲು ಆಟಗಾರರಾಗಿ ಆಯ್ಕೆ ಮಾಡಲಾಗಿದೆ.ಬಿಸಿಸಿಐ ನೀಡಿರುವ ಮಾಹಿತಿ ಪ್ರಕಾರ, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರನ್ನು ಪ್ರಯಾಣೇತರ ಬದಲಿ ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಟೀಮ್ ಇಂಡಿಯಾದ 15 ಸದಸ್ಯರಲ್ಲಿ ಯಾರಾದರೂ ಗಾಯಗೊಂಡರೆ, ಬದಲಿ ಆಟಗಾರರಾಗಿ ಇವರು ದುಬೈಗೆ ಪ್ರಯಾಣಿಸಲಿದ್ದಾರೆ. ಅದರಂತೆ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಈ ಕೆಳಗಿನಂತಿದೆ…
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.ಮೀಸಲು ಆಟಗಾರರು:ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶಿವಂ ದುಬೆ.