ಕರಾಚಿ: ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. ಒಂದು ವೇಳೆ ರೋಹಿತ್ ಶರ್ಮ ಬಳಗ ನಾಕೌಟ್ಗೆ ಅರ್ಹತೆ ಗಳಿಸಿದರೆ, ಸೆಮಿಫೈನಲ್ಸ್ ಹಾಗೂ ಫೈನಲ್ಗೆ ಯುಎಇ ಆತಿಥ್ಯ ವಹಿಸಲಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಕ್ವಿ ಮತ್ತು ಯುಎಇನ ಶೇಖ್ ನಹ್ಯಾನ್ ಅಲ್ ಮುಬಾರಕ್ ನಡುವಿನ ಸಭೆಯ ನಂತರ ಭಾರತದ ಪಂದ್ಯಗಳಿಗೆ ದುಬೈ ನಗರವನ್ನು ಆತಿಥ್ಯವಾಗಿ ಆಯ್ಕೆ ಮಾಡಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ. ಭಾರತ ನಾಕೌಟ್ಗೆ ಅರ್ಹತೆ ಗಳಿಸದಿದ್ದರೆ ಫೈನಲ್ ಪಂದ್ಯ ಲಾಹೋರ್ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವಾಗಿ ವರ್ಷದ ಹಿಂದಿನಿಂದಲೇ ಭಾರೀ ಚರ್ಚೆ, ವಿವಾದಗಳು ನಡೆದಿದ್ದವು. ಮುಂಬೈ ಭಯೋತ್ಪಾದಕರ ದಾಳೆಯ ಬಳಿಕ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ. ಈ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದ್ದು ಚಾಂಪಿಯನ್ಸ್ ಟ್ರೋಫಿಗೂ ಹೈಬ್ರಿಡ್ ಮಾದರಿ ಅನುಸರಿಸಿ ತಟಸ್ಥ ಸ್ಥಳವನ್ನು ಆರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(Iಅಅ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pಅಃ) ಗೆ ಮುಂಚಿತವಾಗಿಯೇ ತಿಳಿಸಿತ್ತು.
ಆದರೆ ಭಾರತ ಬಿಲ್ ಕುಲ್ ಒಪ್ಪದೆ ಹೋದಾಗ ಚೆಂಡು ಐಸಿಸಿಯ ಅಂಗಳಕ್ಕೆ ತೆರಳಿತು. ಈ ವೇಳೆ ಪಾಕಿಸ್ತಾನಕ್ಕೆ ಭಾರತ ಆಗಮಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ಎಲ್ಲಾ ಟೂರ್ನಿಗಳನ್ನು ಸಹ ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕಾಗುತ್ತದೆ ಎಂಬ ಷರತ್ತನ್ನು ಇಟ್ಟಿತು. ಭಾರತ ಇದಕ್ಕೂ ಕ್ಯಾರೇ ಅನ್ನಲಿಲ್ಲ.ಹೈಬ್ರಿಡ್ ಮಾದರಿಗೆ ಐಸಿಸಿ ಒಪ್ಪಿಗೆಕೊನೆಗೆ ಐಸಿಸಿಯು ಚಾಂಪಿಯನ್ಸ್ ಟ್ರೋಫಿಯು ಹೈಬ್ರಿಡ್ ಮಾದರಿಯಲ್ಲೇ ನಡೆಯಲಿದೆ ಎಂದು ಘೋಷಿಸಿತು.
ಜೊತೆಗೆ 2027ರವರೆಗೆ ಭಾರತದಲ್ಲಿ ನಡೆಯುವ ಎಲ್ಲಾ ಐಸಿಸಿ ಟೂರ್ನಿಗಳೂ ಹೈಬ್ರಿಡ್ ಮಾದರಿಯಲ್ಲೇ ನಡೆಯಲಿದೆ ಎಂದೂ ತಿಳಿಸಿತು. ಐಸಿಸಿಯು ಚಾಂಪಿಯನ್ಸ್ ಟ್ರೋಫಿಯು ಹೈಬ್ರಿಡಿ ಮಾದರಿಯಲ್ಲಿ ನಡೆಯುತ್ತದೆ ಎಂದು ಘೋಷಿಸಿದರೂ ಸ್ಥಳವನ್ನು ನಿಗದಿಪಡಿಸಿರಲಿಲ್ಲ. ವೇಳಾಪಟ್ಟಿ ಬಿಡುಗಡೆ ಮಾಡುವ ಸಮಯದಲ್ಲೇ ಸ್ಥಳವನ್ನೂ ಘೋಷಿಸುವುದಾಗಿ ತಿಳಿಸಿತ್ತು. ಆದರೆ ಇದೀಗ ನಡೆದಿರುವ ಮಾತುಕತೆಯ ಪ್ರಕಾರ ದುಬೈ ನಿಗದಿಯಾಗಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.