ಶಿಡ್ಲಘಟ್ಟ: ” ಸ್ವಾಮಿ,ನಾವು ಚರಂಡಿ ಸ್ವಚ್ಛತೆ ಮಾಡ್ತೀವಿ, ಮಲಮೂತ್ರ ಗುಂಡಿ ಸ್ವಚ್ಚ ಮಾಡಿ ಜೀವನ ಸಾಗಿಸ್ತೀವಿ.ಇದೇ ನಮ್ಮ ಬದುಕು- ಜೀವನ.ಈಗ ಈ ಕೆಲಸ ಮಾಡಿದರೆ ಕೇಸು ಹಾಕ್ತಾರಂತೆ. ನಗರಸಭೆ ಆಯುಕ್ತರು ನಮ್ಮನ್ನು ಹೆದರಿಸುತ್ತಾರೆ. ನಗರಸಭೆ ಯವರೇ ನಮ್ಮಿಂದ ರಾತ್ರಿ ವೇಳೆ ಮಲದ ಗುಂಡಿಗಳನ್ನು ಸ್ವಚ್ಚ ಮಾಡಿಸ್ತಾರೆ. ಯಾರೋ ಈ ಬಗ್ಗೆ ದೂರು ಕೊಟ್ಟಿದ್ದಾರೆ ಅಂತ ಈಗ ನಮ್ಮನ್ನು ದೂರ ಇಟ್ಟಿದ್ದಾರೆ. ನಮ್ಮ ಸಂಸಾರ,ಮಕ್ಕಳು ಏನಾಗಬೇಕು?ಈ ಪ್ರಶ್ನೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವರೇ ಉತ್ತರ ನೀಡಬೇಕಿದೆ.
ಕೆಲವು ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಸಫಾಯಿ ಕರ್ಮಚಾರಿಗಳ ವೇದನೆ ಮುಗಿಲುಮುಟ್ಟಿ ಅಸಹಾಯಕ ಮತ್ತು ಅಮಾಯಕ ಪೌರಕಾರ್ಮಿಕರೇ ನಗರ ಸಭೆ ಮುಂದೆ ಪ್ರತಿಭಟನೆ ಮಾಡಿದ್ದರು. ಇಂತಹ ಪ್ರತಿಭಟನೆಯ ಹಿಂದೆ ಅಧಿಕಾರಿಗಳ ಪ್ರಚೋದನೆ ಇದ್ದದ್ದು ಸುಳ್ಳಲ್ಲ. ಇದರಿಂದ ಚಿಂತಾಮಣಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹದೆಗೆಟ್ಟು ಮಲಮೂತ್ರಗಳು ಚರಂಡಿಯಲ್ಲಿ ತುಂಬಿ ರಸ್ತೆಯಲ್ಲಿ ಉಕ್ಕಿ ಹರಿದು ಜನರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವಂತೆ ಆಗಿತ್ತು.
ಇದೀಗ ಶಿಡ್ಲಘಟ್ಟ ಮಯೂರ ಸರ್ಕಲ್ ನಲ್ಲಿ ಮಲಮೂತ್ರಗಳು ಚರಂಡಿ ತುಂಬಿ ಮ್ಯಾನ್ ಹೋಲ್ ತುಂಬಿ ರಸ್ತೆಯಲ್ಲಿ ಉಕ್ಕಿ ಹರಿದು ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತೆ ಆಗಿದೆ.ಇಂದು ಬೆಳಿಗ್ಗೆ ಶಿಡ್ಲಘಟ್ಟ ನಗರದ ಶಾಮಣ್ಣ ಬಾವಿ ರಸ್ತೆಯಿಂದ ಸರ್ಕಾರಿ ಬಸ್ ನಿಲ್ದಾಣದವರಿಗೆ ಒಳಚರಂಡಿ ಕಾಮಗಾರಿ ಮಾಡುತ್ತಿದ್ದು, ತೆರೆದ ಮೊಲದ ಗುಂಡಿಯನ್ನು ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದದ್ದು ಕಂಡು ಬಂತು. ಮಲಮೂತ್ರಗಳು ಹರಿಯುತ್ತಿದ್ದ ಗುಂಡಿಯ ಒಳಗೆ ಇಳಿದು ಸ್ವಚ್ಛ ಮಾಡುತ್ತಿದ್ದ ಕಾರ್ಮಿಕನಿಗೆ ಮತ್ತೊಬ್ಬ ಕಾರ್ಮಿಕ ಸಹಾಯಕನಾಗಿ ಇದ್ದ.
ಯಾವುದೇ ಸಾಮಗ್ರಿಗಳನ್ನು ಧರಿಸದೆ ಮಲದ ಗುಂಡಿಯೊಳಗೆ ಇಳಿದಿದ್ದ ಕಾರ್ಮಿಕನನ್ನು ಪತ್ರಿಕೆ ಮಾತನಾಡಿಸಿತು. ಆದರೆ ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಮಲ ಮೂತ್ರ ವಾಸನೆಗೆ ಆತ ಮದ್ಯ ಸೇವನೆ ಮಾಡಿದ್ದ. ಆತ ಮುಖ ತೋರಿಸದೆ ಹೊರಟುಹೋದ.ಅಲ್ಲಿಗೆ ಬಂದ ಮೇಸ್ತ್ರಿ ಹೇಳಿದ ಮಾತು ಇಡೀ ವ್ಯವಸ್ಥೆ ಏನಾಗಿದೆ ಎಂಬುದನ್ನು ಪ್ರತಿ ಬಿಂಬಿಸುತ್ತಿತ್ತು. ” ನೋಡಿ ಸ್ವಾಮಿ, ನಾವು ಕಷ್ಟಪಟ್ಟು ದುಡಿಯುತ್ತೇವೆ. ಕಳ್ಳತನ ಮಾಡುವುದಿಲ್ಲ. ನಮಗೆ ನಗರಸಭೆ ಆಯುಕ್ತರು, ಅಧ್ಯಕ್ಷರು, ನಗರಸಭೆ ಸದಸ್ಯರು ಎಲ್ಲಾ ಹೇಳಿದ್ದಾರೆ. ನೀವು ಅವರನ್ನೇ ಕೇಳಿ ಹೋಗಿ”. ಎಂದು ಹೇಳಿದರು.
ನಗರಸಭೆ ಆಯುಕ್ತರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ಕೊಳಚೆ ನಿರ್ಮೂಲನಾ ಮಂಡಳಿಯವರು ಸದರಿ ಕಾಮಗಾರಿಯನ್ನು ಮಾಡಿಸುತ್ತಿದ್ದಾರೆ. ಪೈಪ್ ಲೈನ್ ಹಾಕಿಸುವ ಕಾಮಗಾರಿಯನ್ನು ಶ್ರೀನಿವಾಸಪುರದ ಗುತ್ತಿಗೆದಾರರು ಮಾಡಿಸುತ್ತಿದ್ದು ಅವರು ಕಾರ್ಮಿಕರ ಯೋಗ ಕ್ಷೇಮ ಮತ್ತು ಅವರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡಬೇಕು. ಈ ಬಗ್ಗೆ ವಿಚಾರಿಸಿ ತಮಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.ಅಂತೂ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಬಗ್ಗೆ ಧ್ವನಿ ಎತ್ತುವವರ ಅವರ ಮೇಲೆ ಇಲ್ಲಸಲ್ಲದ ದೂರುಗಳು ಹೇಳುವುದು ಕೆಲವು ಅಧಿಕಾರಿಗಳಿಗೆ ಸುಲಭವಾಗಿ ಕೆಲಸವಾಗಿದೆ.