ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ (KFD) ಭೀತಿ ಮತ್ತೆ ಆವರಿಸಿದೆ. ವರ್ಷಪೂರ್ತಿ ದಾಖಲೆ ಮಳೆ ಸುರಿಯುವ ಚಿಕ್ಕಮ ಈ ವರ್ಷ ಜನವರಿಯಲ್ಲಿ ಮಂಗನ ಕಾಯಿಲೆ ಆತಂಕ ಎದುರಾಗಿದೆ. ಹಗಲಲ್ಲಿ ರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಭಾರೀ ಚಳಿ ಈ ರೀತಿಯಾದ ಹವಾಮಾನ ವೈಪರಿತ್ಯಕ್ಕೆ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ಮಂಗನ ಕಾಯಿಲೆ ಕೂಡ ಜನರಲ್ಲಿ ಭೀತಿ ಹುಟ್ಟಿಸಿದೆ. ಮಲೆನಾಡಿಗರು ಮಂಗನಕಾಯಿಲೆಯಿಂದ ಕಂಗಾಲಾಗಿದ್ದಾರೆ.
ಆರಂಭದಲ್ಲಿ ತೀವ್ರ ಸ್ವರೂಪ ಪಡೆದಿರುವ ಮಂಗನ ಕಾಯಿಲೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ ಗ್ರಾಮದ 25 ವರ್ಷದ ಯುವಕನಲ್ಲಿ ಕಾಣಿಸಿಕೊಂಡಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕನ ರಕ್ತ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಬಂದಿರುವ ದೃಢವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕಾಯಿಲೆ ಕಾಣಿಸಿಕೊಂಡು ನಾಲ್ವರನ್ನು ಬಲಿ ಪಡೆದಿತ್ತು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್ಆರ್ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನ ಅರೋಗ್ಯ ಇಲಾಖೆ ಮಂಗನ ಕಾಯಿಲೆ ಅಲರ್ಟ್ ಘೋಷಣೆ ಮಾಡಿ ಮಂಗನ ಕಾಯಿಲೆ ಪತ್ತೆಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಮತ್ತಿಖಂಡ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದೆ. ಅರಣ್ಯದಲ್ಲಿ ಮಂಗಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ.
ಗಾಯದ ಮೇಲೆ ಬರೆ ಎಂಬಂತೆ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಆತಂಕ ಹುಟ್ಟಿಸಿದೆ. ಕಳೆದ ವರ್ಷ ನಾಲ್ವರನ್ನು ಬಲಿ ಪಡೆದು, ಇದೀಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ರಣಕೇಕೆ ಆರಂಭಿಸಿರುವ ಮಂಗನ ಕಾಯಿಲೆ ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ. ಈ ಮಹಾಮಾರಿ ರೋಗ ತೀವ್ರ ಸ್ವರೂಪ ಪಡೆಯದಂತೆ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಸುತ್ತಮುತ್ತಲಿನ ಗ್ರಾಮದಲ್ಲಿ DMPA ತೈಲ ಸೇರಿದಂತೆ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಿದ್ದು ಅರಣ್ಯಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದೆ.
ಒಟ್ಟಾರೆ, ಕಳೆದ ಏಳೆಂಟು ವರ್ಷಗಳಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳದ ಮಂಗನ ಕಾಯಿಲೆ 2024 ರಲ್ಲಿ ತನ್ನ ರೌದ್ರ ರೂಪ ತಾಳಿತ್ತು. ಮಲೆನಾಡಿನ ತಾಲೂಕುಗಳಲ್ಲಿ ಜೀವ ಭಯ ತರಿಸಿತ್ತು. ಈ ಮಂಗನ ಕಾಯಿಲೆ ಎಂಬ ಮಹಾಮಾರಿ ಸದ್ದಿಲ್ಲದೆ ಮತ್ತೆ ಅಟ್ಯಾಕ್ ಮಾಡುತ್ತಿದ್ದು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಅನಾಹುತವಾಗುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ, ಜಿಲ್ಲಾ ಆರೋಗ್ಯ ಇಲಾಖೆ ಕೂಡ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಆದರೆ, ಆರೋಗ್ಯ ಇಲಾಖೆ ನೀಡಿರುವ ಮಾರ್ಗದರ್ಶನವನ್ನು ಗ್ರಾಮಸ್ಥರು ಪಾಲಿಸಿ ಹೇಗೆ ಸಹಕರಿಸುತ್ತಾರೆ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.