ಕಲಾ ಸೇವೆಗೆಂದೇ ತಮ್ಮ ಬದುಕನ್ನು ಸಮರ್ಪಿಸಿ ಕೊಳ್ಳುವ ಅನೇಕರು ತಮ್ಮ ಮಕ್ಕಳು ಕೂಡ ತಮ್ಮಂತೆಯೇ ಕಲಾಸೇವೆಯನ್ನೇ ಮಾಡಲಿ ಎಂದು ಅಪೇಕ್ಷಿಸುತ್ತಾರೆ. ಚಿತ್ರರಂಗದಲ್ಲಿ ಸ್ಟಾರ್ ಆದವರು ಆಗಲು ಸಾಧ್ಯವಾಗದವರು ಚಿತ್ರರಂಗದ ನಾನಾ ವಿಭಾಗದಲ್ಲಿ ಕೆಲಸ ಮಾಡಿದವರೆಲ್ಲರು ಚಿತ್ರರಂಗದಲ್ಲಿಯೇ ತಮ್ಮ ಮಕ್ಕಳು ಕೂಡ ಬೆಳೆಯಬೇಕು ಎಂದು ಕನಸು ಕಾಣುತ್ತಾರೆ.
ತಮ್ಮಿಂದ ಸಾಧ್ಯವಾಗದ್ದನ್ನು ತಮ್ಮ ಮಕ್ಕಳು ಸಾಧಿಸಿ ತೋರಿಸಲಿ ಎಂದು ಆ ದಿಸೆಯಲ್ಲಿ ತಮ್ಮ ಮಕ್ಕಳಿಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸುತ್ತಾರೆ. ಅದಕ್ಕೆ ಬೇಕಾದ ತರಬೇತಿಗಳನ್ನು ಕೂಡ ಕೊಡಿಸುತ್ತಾರೆ.ಹಾಗಂಥ ಇಲ್ಲಿ ಎಲ್ಲರೂ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ತಮ್ಮ ತಂದೆ-ತಾಯಿಯ ಹಾದಿಯನ್ನು ತುಳಿಯದೇ ಅವರದ್ದೇ ಆದ ಕನಸುಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ. ಅಂದುಕೊಂಡ ಗುರಿ ತಲುಪಬೇಕೆಂದು ಹಗಲಿರುಳು ಶ್ರಮವಹಿಸುತ್ತಾರೆ.
ಈ ಎರಡು ಸಾಲಿನಲ್ಲಿ ಚಿನ್ನದ ಕಂಠದ ಗಾಯಕ ವಿಜಯ್ ಪ್ರಕಾಶ್ ಅವರ ಮಗಳು ಯಾವ ಸಾಲಿನಲ್ಲಿ ನಿಲ್ಲುತ್ತಾರೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ತಮ್ಮ ಮಗಳ ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಚಿಕ್ಕದಾದ ಸುಳಿವು ವಿಜಯ್ ಪ್ರಕಾಶ್ ಸದ್ಯಕ್ಕೆ ನೀಡಿದ್ದಾರೆ. ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಸಂದರ್ಶನದ ಒಂದರಲ್ಲಿ ತಮ್ಮ ಕಂಚಿನ ಕಂಠದಿಂದಲೇ ದೇಶ ವಿದೇಶಗಳ ಸಂಗೀತ ಪ್ರಿಯರನ್ನು ಸೆಳೆದಿರುವ ವಿಜಯ್ ಪ್ರಕಾಶ್ ತಮ್ಮ ಮಗಳ ಬಗ್ಗೆ ಮಾತನಾಡಿದ್ದಾರೆ. ನಿಮ್ಮಂತೆಯೇ ನಿಮ್ಮ ಮಗಳು ಕೂಡ ಗಾಯಕಿಯಾಗ್ತಾರಾ ಅಥವಾ ಬೆಳ್ಳಿ ಪರದೆಯ ಮೇಲೆ ನಾಯಕಿಯಾಗಿ ಮಿಂಚುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ವಿಜಯ್ ಪ್ರಕಾಶ್ ನಾನು ನನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಸಂಗೀತವನ್ನು ಆಯ್ಕೆ ಮಾಡಿಕೊಂಡೆ ಹೀಗಾಗಿ ನನಗೆ ಇದ್ದ ಸ್ವಾತಂತ್ರ್ಯವನ್ನು ನಾನು ನನ್ನ ಮಗಳಿಗೆ ಕೂಡ ಕೊಟ್ಟಿದ್ದೇನೆ ಎಂದಿದ್ದಾರೆ.
ಆಕೆ ನನ್ನ ಮಗಳು ಎಂದ ಮಾತ್ರಕ್ಕೆ ನನ್ನ ಆಸೆಯಂತೆ ನಡೆದುಕೊಳ್ಳಬೇಕೆಂಬ ಮನಸ್ಥಿತಿ ನನ್ನದಲ್ಲ ಎಂದಿರುವ ವಿಜಯ್ ಪ್ರಕಾಶ್ ಅವಳಿಗೂ ಒಂದು ಜೀವನ ಇದೆ, ನಾನು ಹೇಗೆ ನನ್ನ ಜೀವನವನ್ನು ಆಯ್ಕೆ ಮಾಡಿಕೊಂಡೆ ಅದೇ ರೀತಿ ಆಕೆಯ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಅವಳಿಗಿದೆ ಎಂದು ಹೇಳಿದ್ದಾರೆ. ಅವಳಿಗೇನು ಇಷ್ಟಾನೋ ಅದೇ ಕೆಲಸವನ್ನು ಮಾಡಲಿ ಎಂದು ಹರಸಿ ಹಾರೈಸಿರುವ ವಿಜಯ್ ಪ್ರಕಾಶ್ ಅವಳು ಕೂಡ ಒಳ್ಳೆಯ ಗಾಯಕಿ ನನ್ನ ಪ್ರಕಾರ ಆಕ್ಟಿಂಗ್ನಲ್ಲಿ ಕೂಡ ಆಸಕ್ತಿ ಇದೆ ಅನ್ಸುತ್ತೆ ಎಂದು ಹೇಳಿದ್ದಾರೆ.ಗೊತ್ತಿಲ್ಲ ಮುಂದೊಂದು ದಿನ ಆಫೀಸ್ನಲ್ಲಿ ಕೆಲಸ ಮಾಡುವುದಾಗಿ ಆಕೆ ಹೇಳಬಹುದು ಅಥವಾ ಯಾವುದಾದರೂ ಬ್ಯುಸಿನೆಸ್ ಕೂಡ ಮಾಡಬಹದು ಇರುವುದು ಒಂದು ಜೀವನ ಅವರ ಅವರ ಆಸೆಗಳಿಗೆ ತಕ್ಕಂತೆ ಬದುಕುವ ಸ್ವಾತಂತ್ರ್ಯವನ್ನು ನಾವು ಕೊಡ ಬೇಕು ಎಂದು ಹೇಳಿದ್ದಾರೆ.