ಬೆಂಗಳೂರು: 136 ಸ್ಥಾನಗಳೊಂದಿಗೆ ಸುಭದ್ರ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂಬರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಾಗಿ ಸಂಪುಟದ ಸಚಿವರಿಗೆ ಉಸ್ತುವಾರಿ ವಹಿಸುವ ಮೂಲಕ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸುತ್ತಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಯ ಉಸ್ತುವಾರಿಯನ್ನು ಸಂಪುಟದ ಸಚಿವರಿಗೆ ನೀಡಿರುವ ವಿಚಾರವಾಗಿ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರು ಅವರು ಮೂರು ಕ್ಷೇತ್ರದಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೂರು ಕ್ಷೇತ್ರಗಳಿಗೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಸಂಪುಟದ ಮಂತ್ರಿಗಳಿಗೆ, ಶಾಸಕರಿಗೆ ಕ್ಷೇತ್ರದ ಉಸ್ತುವಾರಿಯನ್ನು ಹಂಚಲಾಗಿದೆ.
ಹೀಗೆ ಸಿಎಂ, ಡಿಸಿಎಂ ಸೇರಿದಂತೆ ಇಡೀ ಸಂಪುಟವೇ ಉಪ ಚುನಾವಣೆ ಹಿಂದೆ ಬಿದ್ದರೆ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಹೇಗೆ? ಎಂದು ಡಾ. ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ರಾಜಧಾನಿ ಬೆಂಗಳೂರು ತೀವ್ರ ಮಳೆಯಿಂದ ಮುಳುಗುವ ಪರಿಸ್ಥಿತಿಗೆ ಬಂದಿದೆ.
ನಗರದ ಬಹುತೇಕರಸ್ತೆಗಳು ಜಲಾವೃತಗೊಂಡು, ಹಲವು ಮನೆಗಳಿಗೆ ನೀರು ನುಗ್ಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅನುದಾನ ಸಿಗುತ್ತಿಲ್ಲ. ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಂಡಿವೆ. ಇಂತಹ ಸಂದರ್ಭ ದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸಭೆಯನ್ನು
ಕರೆದು ಉಪ ಚುನಾವಣೆಯ ಜವಾಬ್ದಾರಿಯನ್ನು ಸಂಪುಟ ಸಚಿವರಿಗೆ ಹೊರಿಸುತ್ತಿ ರುವುದು ಸರಿಯಲ್ಲ. ಉಪ ಚುನಾವಣೆ ನವೆಂಬರ್ 13ರಂದು ನಡೆಯಲಿದ್ದು ಅಲ್ಲಿಯ ವರೆಗೆ ರಾಜ್ಯದ ಯಾವ ಸಚಿವರು ತಮ್ಮ ಇಲಾಖೆಗಳಿಗೆ ಹಾಗೂ ಕ್ಷೇತ್ರಗಳಿಗೆ ಲಭ್ಯರಿರುವುದಿಲ್ಲ ಎಂದಾದರೆ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.