ಬೆಂಗಳೂರು: ಸುನಿಲ್ ಚೆಟ್ರಿ ಮತ್ತು ರಾಹುಲ್ ಭೆಕೆ ಅವರ ಭರ್ಜರಿ ಆಟದ ಬಲದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಜಯಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 3-0ಯಿಂದ ಹೈದರಾಬಾದ್ ಎಫ್ಸಿ ವಿರುದ್ಧ ಜಯಭೇರಿ ಬಾರಿಸಿತು.
ಟೂರ್ನಿಯಲ್ಲಿ ತಂಡಕ್ಕೆ ಇದು ಸತತ ಎರಡನೇ ಜಯವಾಗಿದೆ. ಒಟ್ಟು ಅರು ಅಂಕ ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.ಪಂದ್ಯದ ಆರಂಭದಿಂದಲೂ ಬಿಎಫ್ಸಿ ಪಾರಮ್ಯ ಮೆರೆಯಿತು. ತಂಡಕ್ಕೆ ಐದನೇ ನಿಮಿಷದಲ್ಲಿ ರಾಹುಲ್ ಭೆಕೆ ಅವರು ಗೋಲು ಖಾತೆ ತೆರೆದರು.
ಇದರ ನಂತರದ 80 ನಿಮಿಷಗಳಲ್ಲಿ ಉಭಯ ತಂಡಗಳ ರಕ್ಷಣಾ ಆಟಗಾರರ ಸತ್ವಪರೀಕ್ಷೆ ನಡೆಯಿತು. ಎರಡೂ ತಂಡಗಳಿಗೆ ಗೋಲು ಒಲಿಯಲಿಲ್ಲ.
ಆದರೆ ಅನುಭವಿ ನಾಯಕ ಚೆಟ್ರಿ ತಮ್ಮ ಕಾಲ್ಚಳಕ ತೋರಿದರು. ಪೆನಾಲ್ಟಿ ಕಿಕ್ ನಲ್ಲಿ (85ನಿಮಿಷ) ಗೋಲು ಹೊಡೆದರು. ಅಷ್ಟಕ್ಕೇ ಸುಮ್ಮನಾಗದ ಅವರು ಕೊನೆಯ ಹಂತದ ನಿಮಿಷಗಳಲ್ಲಿಯೂ ಚುರುಕಾದ ದಾಳಿ ಸಂಘಟಿಸಿದರು.
ಇದರ ಫಲವಾಗಿ ಮತ್ತೊಂದು ಗೋಲು (90+4ನಿ) ಕೂಡ ಒಲಿಯಿತು.ಬಿಎಫ್ಸಿಯ ಆಟಗಾರರು ಚುಟುಕಾದ ಪಾಸ್ಗಳ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹಾಕಿದರು. ಬಿಎಫ್ಸಿಯಿಂದ 595 ಪಾಸ್ಗಳು ದಾಖಲಾದರೆ, ಹೈದರಾಬಾದ್ ತಂಡವು 221 ಪಾಸ್ಗಳನ್ನು ಮಾತ್ರ ಮಾಡಿತು. ಪಾಸ್ಗಳ ನಿಖರತೆಯಲ್ಲಿ ಬಿಎಫ್ಸಿಯು ಶೇ 90ರಷ್ಟು ಸಫಲವಾಗಿತ್ತು. ಆದರೆ ತಂಡದ ಆಟಗಾರರು ಮೂರು ಸಲ ಹಳದಿ ಕಾರ್ಡ್ ದರ್ಶನ ಮಾಡಿದರು.