ಬಲೋದ್: ಛತ್ತೀಸ್ಗಢದ ಬಲೋದ್ ಜಿಲ್ಲೆಯಲ್ಲಿ ಟ್ರಕ್ ಮತ್ತು ಎಸ್ಯುವಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ದೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಜಿಲ್ಲೆಯ ಗುಂಡರ್ದೇಹಿ ಪ್ರದೇಶದಲ್ಲಿ ಸಂಬಂಧಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಅವರು ಹೇಳಿದ್ದಾರೆ.
“ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎಸ್ಯುವಿಯಲ್ಲಿದ್ದ 13 ಪ್ರಯಾಣಿಕರಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ದುರ್ಪತ್ ಪ್ರಜಾಪತಿ(30), ನಾಲ್ವರು ಮಹಿಳೆಯರು – ಸುಮಿತ್ರಾ ಬಾಯಿ ಕುಂಭಕರ್(50), ಮನಿಶಾ ಕುಂಭಕರ್(35), ಸಗುನ್ ಬಾಯಿ ಕುಂಭಕರ್(50) ಮತ್ತು ಇಮ್ಲಾ ಬಾಯಿ(55) ಮತ್ತು ಅಪ್ರಾಪ್ತ ಬಾಲಕ ಜಿಗ್ನೇಶ್ ಕುಂಭಕರ್(7) ಎಂದು ಗುರುತಿಸಲಾಗಿದೆ.
ಐವರು ಮಹಿಳೆಯರು ಮತ್ತು ಮಗು ಸೇರಿದಂತೆ ಏಳು ಗಾಯಗೊಂಡ ವ್ಯಕ್ತಿಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಜನಂದಗಾಂವ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.