ನವದೆಹಲಿ: ದೇಶದಾದ್ಯಂತ ಇಂದು (ಮಂಗಳವಾರ) ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. 1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನೆಪಿಗಾಗಿ ದೇಶ ಈ ದಿನವನ್ನು ಆಚರಿಸುತ್ತದೆ. 2015ರಿಂದ ಸಂವಿಧಾನ ದಿನ ಆಚರಣೆ ಆರಂಭವಾಯ್ತು. ಈ ಐತಿಹಾಸಿಕ ದಿನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಸಮಸ್ತ ಭಾರತೀಯರಿಗೆ ಸಂವಿಧಾನ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಟ್ವೀಟ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಸ್ತ ಭಾರತೀಯರಿಗೆ ಸಂವಿಧಾನ ದಿನದ ಶುಭಾಶಯ ತಿಳಿಸಿದ್ದಾರೆ.
ಭಾರತೀಯ ಸಂವಿಧಾನದ 75 ನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಜನತೆಗೆ ಸಂವಿಧಾನ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಪೋಸ್ಟ್ ಮಾಡಿ, ಸಂವಿಧಾನವು ‘ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಮಂತ್ರವಾಗಿದೆ’ ಎಂದು ಅವರು ದೃಢಪಡಿಸಿದರು. ಸಂವಿಧಾನ ದಿನದ ಶುಭಾಶಯಗಳು. ಇಂದು ಭಾರತವು ಸಂವಿಧಾನದ 75 ನೇ ವರ್ಷಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಸೇರಿದಂತೆ ಎಲ್ಲಾ ಸಂವಿಧಾನ ಶಿಲ್ಪಿಗಳ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ, ಮೋದಿಯವರು ‘ಸಂವಿಧಾನ ದಿನ’ವನ್ನು ಆಚರಿಸಲು ಪ್ರಾರಂಭಿಸಿದರು.
ಭಾರತದ ಪ್ರಜಾಪ್ರಭುತ್ವದ ಶಕ್ತಿ ನಮ್ಮ ಸಂವಿಧಾನವಾಗಿದೆ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಮಂತ್ರವನ್ನು ಇದು ನೀಡುತ್ತದೆ, ಸಂವಿಧಾನವು ಕೇವಲ ವೇದಿಕೆಯ ಮೇಲೆ ಪ್ರದರ್ಶಿಸಬೇಕಾದ ಪುಸ್ತಕವಲ್ಲ, ಅದನ್ನು ಆಂತರಿಕಗೊಳಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಅತ್ಯುನ್ನತ ಕೊಡುಗೆಯನ್ನು ನೀಡುವ ಕೀಲಿಯಾಗಿದೆ. ಈ ಸಂವಿಧಾನದ ದಿನದಂದು ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಪ್ರತಿಜ್ಞೆ ಮಾಡೋಣ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ. ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು.ಈ ಆಶಯಗಳೊಂದಿಗೆ ಸಾಗುತ್ತಿರುವ ನಮ್ಮ ಸರ್ಕಾರ ಎದುರಾಗುವ ಎಲ್ಲ ಪ್ರತಿರೋಧಗಳನ್ನು ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಕೈಯಲ್ಲಿಟ್ಟು ಹೋಗಿರುವ ಸಂವಿಧಾನದ ಅಸ್ತ್ರದ ಮೂಲಕವೇ ಎದುರಿಸಿ ಮುನ್ನಡೆಯಲಿದೆ.
ಇದೇ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಪ್ರಸ್ತಾವಣೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಆಶಯಗಳನ್ನು ಎತ್ತಿಹಿಡಿಯುತ್ತಿರುವುದು ಅತೀವ ಸಂತೋಷ ಮತ್ತು ಭವಿಷ್ಯದಲ್ಲಿ ಭರವಸೆಯನ್ನು ಮೂಡಿಸಿದೆ. ಭಾರತೀಯ ಸಂವಿಧಾನವು ಅಂಗೀಕಾರಗೊಂಡ ಈ ದಿನದಂದು ಸಂವಿಧಾನಶಿಲ್ಪಿ ಅಂಬೇಡ್ಕರರನ್ನು ಗೌರವದಿಂದ ನೆನೆಯುತ್ತೇನೆ. ನಾಡಬಾಂಧವರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು. ಜೈ ಸಂವಿಧಾನ ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನವೇ ಆತ್ಮ. 1949ರ ಈ ದಿನ ಭಾರತದ ಸಂವಿಧಾನವು ಸಮರ್ಪಣೆಯಾದಂತಹ ಸುದಿನ. ಈ ಮಹತ್ವದ ದಿನದಂದು ನಮ್ಮ ಸಂವಿಧಾನವನ್ನು ಗೌರವಿಸೋಣ ಹಾಗೂ ಅದರ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದು ಹೇಳಿದ್ದಾರೆ.