ಮೈಸೂರು: ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜೆಡಿಎಸ್ ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ.ಮೈಸೂರಿನಲ್ಲಿಂದು ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಪ್ರಾರಂಭವಾಗುವುದಕ್ಕೂ ಮುನ್ನ ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಪಕ್ಷದವರು ಯಾವ ಪುರುಷಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅದು ಏನು ಆಗಲಿಲ್ಲವೆಂದು ಗೊತ್ತಾದ ಮೇಲೆ ಸುಳ್ಳು ಆರೋಪಗಳನ್ನಿಟ್ಟುಕೊಂಡು ಮುಡಾ ಹಗರಣದ ಹೆಸರಿನಲ್ಲಿ ನನ್ನ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ದೂರಿದರು.
2013 ಮತ್ತು 23ರಲ್ಲಿ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ.
ಇವರು ಕರ್ನಾಟಕದಲ್ಲಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದರ ಎಂದು ಪ್ರಶ್ನೆ ಮಾಡಿದ ಮುಖ್ಯಮಂತ್ರಿಯವರು ಮಧ್ಯಪ್ರದೇಶ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಬೀಳಿಸಿದರು ಎಂದು ಆರೋಪಿಸಿದರು.ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಟಿ.ಜೆ ಅಬ್ರಹಾಂ ಬೆಳಿಗ್ಗೆ 11.30ಕ್ಕೆ ರಾಜ್ಯಪಾಲರಿಗೆ ದೂರು ನೀಡುತ್ತಾರೆ. ರಾತ್ರಿ ವೇಳೆಗೆ ನಮಗೆ ನೋಟಿಸ್ ಜಾರಿಯಾಗುತ್ತದೆ. ಇದರಿಂದಲೇ ತಿಳಿಯುತ್ತದೆ ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಪಾಲರ ಮೇಲೆ ಬಿಜೆಪಿಯವರು ಒತ್ತಡ ಹೇರುವುದು ಎಂದು ತಿಳಿಸಿದರು.
ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಪುನರುಚ್ಚಿಸಿದ ಅವರು, ಬಿಜೆಪಿ-ಜೆಡಿಎಸ್ನವರು ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವುದು ನನ್ನ ಪ್ರಕಾರ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವುದು ಬರುವುದಿಲ್ಲ. ನಾವುತಪ್ಪು ಮಾಡದೆ ಪ್ರಾಮಾಣಿಕವಾಗಿರುವುದರಿಂದಲೇ ರಾಜ್ಯದ ಜನತೆ 135 ಸ್ಥಾನ ನೀಡಿ ನಮಗೆ ಆಶೀರ್ವದಿಸಿರುವುದು ಎಂದು ಹೇಳಿದರು.
ಜನಾಂದೋಲನ ಸಮಾವೇಶಕ್ಕೆ ಕ್ಷಣಗಣನೆ ಆರಂಭಕ್ಕೂ ಮುನ್ನ ಹೇಳಿಕೆ ನೀಡಿದ ಮುಖ್ಯಮಂತ್ರಿಯವರು ಮಿಕ್ಕೆದ್ದೆಲ್ಲವನ್ನು ಸಮಾವೇಶದಲ್ಲಿಯೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಮೈಸೂರು ನಗರದಲ್ಲಿ ಆಯೋಜಿಸಿರುವ ಕಾಂಗ್ರೆಸ್ನ ಜನಾಂದೋಲನ ಸಮಾವೇಶಕ್ಕೆ ಮೂಲೆಮೂಲೆಯಿಂದಲು ಜನ ಬೆಳಿಗ್ಗೆಯಿಂದಲೇ ಆಗಮಿಸಿತೊಡಗಿದ್ದರು. ಮಧ್ಯಾಹ್ನ 12ಗಂಟೆ ವೇಳೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದ ಸ್ಥಳಕ್ಕೆ ಆಗಮಿಸತೊಡಗಿದ್ದರು.
ಮೈಸೂರು ಮಹಾನಗರದಲ್ಲಿ ಮೆಟ್ರೋ ಪೋಲ್ ವೃತ್ತದಲ್ಲಿ ಅಳವಡಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುಟುಂಬದ ಮುಡಾ ಹಗರಣದ ನಿವೇಶನದ ಸಂಬಂಧದ ಫ್ಲೆಕ್ಸ್ನಿಂದಾಗಿ ಆ ಪ್ರದೇಶದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮಾಜಿ ಸಚಿವ ಜೆಡಿಎಸ್ನ ಸಾ.ರಾ.ಮಹೇಶ್ ನೇತೃತ್ವದಲ್ಲಿ ಫ್ಲೆಕ್ಸ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತಾದರೂ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕರರನ್ನು ವಶಕ್ಕೆ ಪಡೆದರು.ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರದ ಬಹುತೇಕ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಜಿಲ್ಲಾ ಪೊಲೀಸರು ಸೇರಿದಂತೆ ಹೊರ ಜಿಲ್ಲೆಯಿಂದ ಸುಮಾರು 1500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಡೆಸಲಾಗಿತ್ತು.