ಬೆಂಗಳೂರು: ಮುಂದಿನ ಜನವರಿ ತಿಂಗಳಿಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ನಿನ್ನೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಸೋಮಣ್ಣ ಈ ಹೇಳಿಕೆ ನೀಡಿದ್ದಾರೆ.
ವಿ.ಸೋಮಣ್ಣರ ಮಾತಿಗೆ ಧ್ವನಿಗೂಡಿಸಿರುವ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸೋಮಣ್ಣ ಭವಿಷ್ಯ ನಿಜವಾಗಲಿದೆ ಎಂದ ಸಮರ್ಥನೆ ಮಾಡಿ ಮಾತನಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಆಖಾಡದಲ್ಲಿ ನಿನ್ನೆ ಬೃಹತ್ ಸಮಾವೇಶ ನಡೆಸಿದ ಎನ್ಡಿಎ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಅದೇ ವೇದಿಕೆಯಲ್ಲಿ ಜನವರಿಯ ಬಳಿಕ ರಾಜ್ಯದಲ್ಲಿ ಸಿದ್ಧರಾಮಯ್ಯರ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದ ವಿ.ಸೋಮಣ್ಣ ಸಹ ಹೇಳಿದ್ದಾರೆ.
ವಿ.ಸೋಮಣ್ಣ ಈ ರೀತಿಯ ಭವಿಷ್ಯ ನುಡಿಯಲು ಕಾರಣವೇನು? ಎಂದು ತಿಳಿಯಲು ಮುಂದದಾಗ ಲಭ್ಯವಾದ ಮಾಹಿತಿಯಂತೆ ಈ ಹಿಂದೆ ನಡೆದ ೨೦೨೩ ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲಿ ವಿ.ಸೋಮಣ್ಣ ಸ್ಫರ್ಧೆ ಮಾಡಿದ್ದರು.
ಚಾಮರಾಜನಗರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ವಿ.ಸೋಮಣ್ಣ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲುಂಟಾಗಿತ್ತು.
ಸೋಲಿನ ಬಳಿಕ ಸೋಮಣ್ಣ ಅವರು ತಾವು ನಂಬುವ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಅಜ್ಜಯ್ಯರ ಮೊರೆ ಹೋಗಿದ್ದರಂತೆ
ವಿ.ಸೋಮಣ್ಣರಿಗೆ ನೊಣವಿನಕೆರೆ ಅಜ್ಜಯ್ಯ ಅಂದರೆ ಬಹಳ ನಂಬಿಕೆ.
ಬಳಿಕ ೨೦೨೪ ರಲ್ಲಿ ಎದುರಾದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಜ್ಜಯ್ಯನವರ ಆಶೀರ್ವಾದದಿಂದ, ತುಮಕೂರು ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡ ವಿ. ಸೋಮಣ್ಣ ಅವರು ಭರ್ಜರಿ ಗೆಲುವುಸಾಧಿಸಿ ಇದೀಗ ಕೇಂದ್ರದಲ್ಲಿ ಮೋದಿ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೊಣವಿನಕೆರೆ ಅಜ್ಜಯ್ಯರ ಆಶೀರ್ವಾದದಿಂದಲೇ ಕೇಂದ್ರದಲ್ಲಿ ಸಚಿವನಾಗಿದ್ದೇನೆ ಎಂದು ನಂಬಿರುವ ಅವರು, ಇದೇ ನೊಣವಿನಕೆರೆ ಅಜ್ಜಯ್ಯರ ಬಳಿ ರಾಜ್ಯ ಸರ್ಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ನೊಣವಿನಕೆರೆ ಅಜ್ಜಯ್ಯರಿಂದ ಈ ಸರ್ಕಾರದ ಬಗ್ಗೆ ಭವಿಷ್ಯ ತಿಳಿದಿರುವ ಅವರು, ಸಿದ್ಧರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನವರಿಯೊಳಗೆ ಪತನಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಚಚೆ ನಡೆದಿದೆ.