ಚಂಡೀಗಢ: ಜಲಂಧರ್ನ ಫೋಲ್ರಿವಾಲ್ ಗ್ರಾಮದ ಹೊರವಲಯದಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ಪಂಜಾಬ್ ಪೊಲೀಸರು ಕುಖ್ಯಾತ ಲಾಂಡಾ ಗ್ಯಾಂಗ್ನ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಅಲ್ಲದೆ ಅವರ ಬಳಿ ಇದ್ದ ಏಳು ಗನ್ ಗಳು ಮತ್ತು ಆರು ಮ್ಯಾಗಜೀನ್ಗಳು ಹಾಗೂ ಆರು ಕಾರ್ಟ್ರಿಡ್ಜ್ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕರ್ತಾರ್ಪುರದ ಭೀಖಾ ನಂಗಲ್ ನಿವಾಸಿ ಜಸ್ಕರನ್ ಅಲಿಯಾಸ್ ಕರಣ್ ಮತ್ತು ಫಗ್ವಾರದ ಮೆಹ್ಲಿ ಗೇಟ್ನಲ್ಲಿರುವ ಮೊಹಲ್ಲಾ ತಾನೆದಾರ ನಿವಾಸಿ ಫತೇದೀಪ್ ಸಿಂಗ್ ಅಲಿಯಾಸ್ ಪರ್ದೀಪ್ ಸೈನಿ ಎಂದು ಗುರುತಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಜಲಂಧರ್ ನ ಸದರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಲಂಧರ್ ಕಮಿಷನರೇಟ್ ಪ್ರದೇಶದಲ್ಲಿ ಲಾಂಡಾ ಗ್ಯಾಂಗ್ನ ಕ್ರಿಮಿನಲ್ಗಳ ಉಪಸ್ಥಿತಿಯ ಕುರಿತು ಗುಪ್ತಚರ ಮಾಹಿತಿ ಪಡೆದ ನಂತರ, ಜಲಂಧರ್ ಪೊಲೀಸ್ ಕಮಿಷನರ್ ಸ್ವಪನ್ ಶರ್ಮಾ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ತಂಡಗಳು ವ್ಯಾಪಕ ಕಾರ್ಯಾಚರಣೆ ಪ್ರಾರಂಭಿಸಿದ್ದವು.
ಶೋಧ ಕಾರ್ಯಾಚರಣೆ ವೇಳೆ ದರೋಡೆಕೋರರು ಪೊಲೀಸ್ ತಂಡಗಳ ಮೇಲೆ ಗುಂಡು ಹಾರಿಸಿದರು. ಪೊಲೀಸರು ಸಹ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯ ವೇಳೆ ಆರೋಪಿಗಳಿಗೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗುಂಡಿನ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
“ಕಾರ್ಯಾಚರಣೆಯ ಸಮಯದಲ್ಲಿ ಎರಡೂ ಕಡೆಯಿಂದ 50 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಯಿತು” ಎಂದು ಯಾದವ್ ಹೇಳಿದ್ದಾರೆ.