ಬೆಂಗಳೂರು: ಪರಿಸರ ರಕ್ಷಣೆ ಎನ್ನುವುದು ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ಭಾವಿಸುವವರಿದ್ದಾರೆ. ಹಾಗಲ್ಲ – ಪ್ರತಿಯೊಬ್ಬರೂ ತಮ್ಮ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ತಮ್ಮ ಸುತ್ತಮುತ್ತಲ ಪರಿಸರ ಬೆಳೆಸಲು ಕೊಡುಗೆ ನೀಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ.
ಆಧುನಿಕ ಜೀವನಶೈಲಿಯಿಂದ ಪರಿಸರದ ಮೇಲೆ ಅನೇಕ ರೀತಿಯ ಪರಿಣಾಮಗಳು ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಪೃಕೃತಿ ವಿಕೋಪದಿಂದ ಭೂಪ್ರದೇಶದ ಗುಡ್ಡಗಾ ಡುಗಳು ಕುಸಿತ ಕಂಡು ಬರುತ್ತಿದೆ. ಇದಕ್ಕೆಲ್ಲ ಪರಿಹಾರವಾಗಿ ಪರಿಸರ ಕಾಳಜಿ ಎಲ್ಲರಲ್ಲೂ ಮೂಡಬೇಕು ಎಂದು ಮಾಜಿ ಸಚಿವರು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ ತಿಳಿಸಿದರು.
ವಿಜಯನಗರದ ಅತ್ತಿಗುಪ್ಪೆ ವಾರ್ಡ್ ನ ಚಂದ್ರಲೇಔಟ್ 80 ಅಡಿ ರಸ್ತೆಯಲ್ಲಿ ಪಾಕಶಾಲಾ ಹೋಟೆಲ್ ಮುಂಭಾಗ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇಂದಿನ ಋತುಗಳ ವ್ಯತ್ಯಾಸದಲ್ಲಿ, ತಾಪಮಾನದ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ, ಹಸಿರು ಪರಿಸರ ಕಾಪಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು.
ಅಭಿವೃದ್ಧಿಯ ನೆಪದಲ್ಲಿ ಕಳೆದ 60 ವರ್ಷಗಳಿಂದ ಪರಿಸರ ಹಾಗೂ ಗಿಡ-ಮರಗಳ ಮಾರಣಹೋಮ ನಡೆದಿದೆ. ಅರಣ್ಯ ನಾಶದಿಂದ ಇಂದು ಸರಿಯಾದ ಮಳೆ-ಬೆಳೆ ಬರುತ್ತಿಲ್ಲ. ಅದು ಹೀಗೆಯೇ ಮುಂದುವರಿದರೆ ಜಲಕ್ಷಾಮ ಉಂಟಾಗಿ ಜೀವ ಸಂಕುಲ ಸರ್ವನಾಶ ಆಗುವುದರಲ್ಲಿ ಸಂದೇಹವಿಲ್ಲ, ಶುದ್ಧ ಗಾಳಿ, ಶುದ್ಧ ನೀರಿಗಾಗಿ ನಾವು ಪರಿಸರ ಸಂರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರವಿಶಂಕರ್ ಸಲಹೆ ನೀಡಿದರು.
ಹಸಿರುಕರಣಗೊಳಿಸುವ ಈ ಪ್ರಕ್ರಿಯೆಯಲ್ಲಿ ತಾವು ನಿರಂತರ ತೊಡಗಿಸಿಕೊಂಡು ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗ್ವಾರ್ ಫ್ರೆಂಡ್ಸ್ ಅಸೋಸಿಯೇಷನ್ ಮುಂದಿನ ದಿನಗಳಲ್ಲಿ ಅತ್ತಿಗುಪ್ಪೆ ವಾರ್ಡ್ ನ ವಿವಿಧ ಬಡಾವಣೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಮ್ಮ ಶಾಸಕರಾದ ಎಂ. ಕೃಷ್ಣಪ್ಪ ರವರ ಅಧ್ಯಕ್ಷತೆಯಲ್ಲಿ ನಿಯಮಿತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಜಾಗ್ವಾರ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ ಎನ್ ಜಗದೀಶ್ ತಿಳಿಸಿದರು.
ಮಾನವರು ತಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಮಾಡುತ್ತಿದ್ದರೂ, ಅವುಗಳು ಮಾತ್ರ ನಮ್ಮ ಜೀವನಕ್ಕೆ ಆವಶ್ಯವಾದ ಆಮ್ಲಜನಕವನ್ನು ನೀಡುತ್ತಿದೆ. ಪ್ರಕೃತಿಯ ಈ ಗುಣಕ್ಕೆ ನಾವು ಋಣಿಯಾಗಬೇಕಿದೆ ಎಂದು ವಿಜಯನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಾಗ್ವಾರ್ ಸಂಸ್ಥೆಯ ಸದಸ್ಯರಾದ ಬಿ. ಆನಂದ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನಾಗರಿಕರಿಗೆ ಗಿಡಗಳನ್ನು ವಿತರಿಸಲಾಯಿತು. ನಂತರ ಜಾಗ್ವಾರ್ ಸಂಸ್ಥೆಯ ವತಿಯಿಂದ ಶಾಸಕ ಎಂ. ಕೃಷ್ಣಪ್ಪ ರವರನ್ನು ಮತ್ತು ಕೆ ಆರ್ ನಗರ ಶಾಸಕ ರವಿಶಂಕರ್ ಮತ್ತು ಇನ್ನಿತರ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾಸಿಯಾ ನೂತನ ಅಧ್ಯಕ್ಷ ರಾಜ ಗೋಪಾಲ್, ನೀಲಕಂಠ ಗೌಡರು, ಜಾಗ್ವಾರ್ ಫ್ರೆಂಡ್ಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ಕಾರ್ಯದರ್ಶಿ ರಾಧಕೃಷ್ಣ, ಉಪಾಧ್ಯಕ್ಷ ಶಿವಣ್ಣಗೌಡರು, ಮಾಜಿ ಕಾರ್ಯದರ್ಶಿ ನಿವೃತ್ತ ಎಸಿಪಿ ಅಜ್ಜಪ್ಪರವರು, ಖಜಾಂಚಿ ಡಾ. ರಮೇಶ್, ನಿರ್ದೇಶಕರುಗಳಾದ ಎಂ. ಕೃಷ್ಣಮೂರ್ತಿ, ಶಶಿಧರ್ ಮತ್ತಿತರರು ಹಾಗೂ ನೂರಾರು ಸ್ಥಳೀಯ ನಾಗರಿಕರು ಇದ್ದರು.