ನವದೆಹಲಿ: ಈ ವರ್ಷ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ಜಾತಿ ಗಣತಿ’ ಮತ್ತು ಆರ್ಥಿಕ ಸಮೀಕ್ಷೆಯ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬರೇಲಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜನವರಿ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಂಸದ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದೆ.
ಈ ಪ್ರಕರಣದ ಅರ್ಜಿದಾರರಾದ ಪಂಕಜ್ ಪಾಠಕ್, ಚುನಾವಣೆಯಲ್ಲಿ ಜಾತಿ ಗಣತಿ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯು ದೇಶದಲ್ಲಿ ಅಂತರ್ಯುದ್ಧವನ್ನು ಪ್ರಾರಂಭಿಸುವ ಪ್ರಯತ್ನದಂತೆ ಕಾಣುತ್ತಿದೆ. ನಾವು ಮೊದಲು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆ ಬಳಿಕ ವಜಾಗೊಂಡ ಸಂಸದ-ಶಾಸಕ ನ್ಯಾಯಾಲಯ, ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ತೆರಳಿ, ಅಲ್ಲಿ ನಮ್ಮ ಮನವಿಯನ್ನು ಸಲ್ಲಿಸಿ, ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ಚುನಾವಣಾ ರ್ಯಾಲಿಯಲ್ಲಿ, “ಮೊದಲು ಹಿಂದುಳಿದ ಜಾತಿಗಳು, ಎಸ್ಗಳು, ಎಸ್ಟಿಗಳು, ಅಲ್ಪಸಂಖ್ಯಾತರು, ಇತರ ಜಾತಿಗಳ ನಿಖರವಾದ ಜನಸಂಖ್ಯೆ ಮತ್ತು ಸ್ಥಿತಿಯನ್ನು ತಿಳಿಯಲು ನಾವು ಜಾತಿ ಗಣತಿಯನ್ನು ನಡೆಸುತ್ತೇವೆ. ನಂತರ, ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ. ಅದಾದ ಬಳಿಕ, ಈ ವರ್ಗಗಳಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಭಾರತದ ಸಂಪತ್ತು, ಉದ್ಯೋಗಗಳು ಮತ್ತು ಇತರ ಕಲ್ಯಾಣ ಯೋಜನೆಗಳನ್ನು ವಿತರಿಸಲು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿಯ ಹೇಳಿಕೆಯು ವಿವಾದಾತ್ಮಕ ವಿಷಯವಾಗಿ ಮಾರ್ಪಟ್ಟಿದೆ. ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಈ ಬಗ್ಗೆ ಆಕ್ಷೇಪ ಹೊರಹಾಕಿದ್ದವು.