ವಿಜಯಪುರ: ಹೋಬಳಿಯ ವೆಂಕಟಗಿರಿಕೋಟೆ ಗ್ರಾಮದ ಗಂಗಾಭವಾನಿ ದೇವಾಲಯದ ಆವರಣದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ, ಸಿಂಧೂರ ಜಾನಪದ ಮತ್ತು ಸಾಂಸ್ಕೃತಿಕ ಕಲಾಸಂಸ್ಥೆಯ ಸಹಯೋಗದಲ್ಲಿ `ಜಾನಪದ ಸಂಭ್ರಮ-2024’ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯ ಆರ್.ಅಮರನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಗಮ ಸಂಗೀತ, ಜಾನಪದ ಗೀತಗಾಯನ, ಡೊಳ್ಳುಕುಣಿತ, ತಮಟೆ ವಾದನ ತಂಡಗಳು ಪ್ರದರ್ಶನ ನೀಡಿದವು.ಈ ವೇಳೆ ಮಾತನಾಡಿದ ಅವರು, ಆಧುನಿಕತೆಯ ಅಬ್ಬರದಲ್ಲಿ ಜನಮಾನಸದಿಂದ ಮರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಜಾನಪದದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ.
ಇದರಿಂದ ಅವರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಜಾನಪದದ ಮಹತ್ವವನ್ನು ಅವರಿಗೆ ಮನದಟ್ಟಾಗುವಂತೆ ತಿಳಿಸಿದಲ್ಲಿ ಮತ್ತೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತ್ಯಜಿಸಿ ದೇಶಿಯ ಸಂಸ್ಕೃತಿಯತ್ತ ಮರಳುತ್ತಾರೆ ಈ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಅನುದಾನಗಳನ್ನು ಇಲಾಖೆಗೆ ಒದಗಿಸಬೇಕು ಎಂದರು.
ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ಎಂ.ರಾಜಪ್ಪ ಮಾತನಾಡಿ, ಬದುಕಿನ ಸಾಮರಸ್ಯದ ಪಾಠ ಹೇಳುವ ಜಾನಪದ ಸಾಹಿತ್ಯದ ರಕ್ಷಣೆ ಮಾಡಲು ನಾವೆಲ್ಲರೂ ಮುಂದಾಗಬೇಕಾಗಿದೆ.
ಇದರಲ್ಲಿ ಜೀವನದ ವಾಸ್ತವಾಂಶ ಅಡಗಿದೆ. ಅದರ ಬೇರಿನ ಮಹತ್ವ ನಮ್ಮೆಲ್ಲರ ಮೂಲ ಸಂಸ್ಕೃತಿಯಾಗಿದೆ. ಜಾನಪದದಲ್ಲಿ ಆಡಂಬರವಿಲ್ಲ, ತೋರಿಕೆಯಿಲ್ಲ, ಸತ್ಯ, ಧರ್ಮ, ನ್ಯಾಯ, ನಿಷ್ಠೆ, ಮಾನವೀಯತೆ, ತ್ಯಾಗ, ಎಲ್ಲವೂ ಅಡಗಿದೆ. ಸಹೋದರತ್ವ, ಮತ್ತು ಸಮನ್ವಯ ಭಾವನೆ ಹರಡುವ ಜಾನಪದ ಸಂಸ್ಕೃತಿಯ ಮಹತ್ವ ಯುವ ಪೀಳಿಗೆಗೆ ತಿಳಿಸುವ ಕೆಲಸ ವೇಗವಾಗಿ ಆಗಬೇಕು ಎಂದರು.
ಸಿಂಧೂರ ಜಾನಪದ ಮತ್ತು ಸಾಂಸ್ಕೃತಿ ಕಲಾಸಂಸ್ಥೆಯ ಅಧ್ಯಕ್ಷ ಎಂ.ಮುನಿರಾಜು (ಎಂ.ಎಂ.ಆರ್) ಮಾತನಾಡಿ, ಯುವಜನರಲ್ಲಿನ ಮೌಡ್ಯವನ್ನು ತೊಲಗಿಸಿ, ನಮ್ಮ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದರ ಜೊತೆಯಲ್ಲಿ ಬೀದಿನಾಟಕಗಳ ಮೂಲಕ ಜನರನ್ನು ಜಾಗೃತಗೊಳಿಸುವಂತಹ ಕೆಲಸವನ್ನೂ ಮಾಡುತ್ತಿದ್ದೇವೆ ಎಂದರು.
ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಜಗದೀಶ್, ಮುದುಗುರ್ಕಿ ಮೂರ್ತಿ, ನರಸಿಂಹಪ್ಪ(ಭಾಷ), ವೆಂಕಟಗಿರಿಕೋಟೆ ಬಿ.ಮೂರ್ತಿ, ಚಿನ್ನಪ್ಪ, ಚಿಕ್ಕಮುನಿಯಪ್ಪ, ಗೋವಿಂದಪ್ಪ, ರವಿ, ಮುನಿವೆಂಕಟಪ್ಪ, ಸಿಂಧೂರ ಜಾನಪದ ಮತ್ತು ಸಾಂಸ್ಕೃತಿ ಕಲಾಸಂಸ್ಥೆಯ ಉಪಾಧ್ಯಕ್ಷ ಮುರಳೀಧರ್, ಪ್ರಧಾನ ಕಾರ್ಯದರ್ಶಿ ತ್ರಿವೇಣಿ, ಖಜಾಂಚಿ ಹರಿಪ್ರಸಾದ್ ಇದ್ದರು.