ವಿಜಯಪುರ: ಏಳು ಬಾರಿ ಸಂಸದನಾದರೂ ಸಚಿವ ಸ್ಥಾನ ದೊರೆಯದಿದ್ದಕ್ಕೆ ಬಿಜೆಪಿಯ ಹಿರಿಯ ಸದಸ್ಯ ವಿಜಯಪುರ ಕ್ಷೇತ್ರದ ರಮೇಶ್ ಜಿಗಜಣಗಿ ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಏಳು ಬಾರಿ ಸಂಸದನಾಗಿ ಗೆದ್ದರು ನನಗೆ ಸಚಿವ ಸ್ಥಾನ ದೊರೆತಿಲ್ಲದಿರುವುದಕ್ಕೆ ಪಕ್ಷದ ಅಭಿಮಾನಿಗಳು ನನ್ನ ಬೆಂಬಲಿಗರು ತೀವ್ರ ಅಸಮಾಧಾನ ಹೊಂದಿದ್ದಾರೆ. ನಾವು ಮೊದಲೇ ಹೇಳಿದ್ವಿ ಬಿಜೆಪಿ ಸೇರಬೇಡಿ ಎಂದು ಬಹಳ ಜನ ದಲಿತರು ವಾದ ಮಾಡಿದ್ದರು. ಆದರೂ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದಾರೆ. ದಲಿತನಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯಿಂದ ಏಳು ಚುನಾವಣೆಗಳಲ್ಲಿ ಗೆದ್ದು ಬಂದ ಏಕೈಕ ಸಂಸದನಾದರೂ ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ ಎಂದು ಹೈಕಮಾಂಡ್ ವಿರುದ್ಧ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಜಯಪುರ ನಗರದಲ್ಲಿ ಸಂಸದರ ಕಚೇರಿ ಉದ್ಘಾಟನೆ ಹಾಗೂ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ಮಂತ್ರಿಸ್ಥಾನ ನೀಡುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ನನಗೆ ಅವಶ್ಯಕತೆ ಇರುವುದು ಜನರದ್ದು. ನಾನು ದೆಹಲಿಯಿಂದ ವಿಜಯಪುರಕ್ಕೆ ಮರಳಿದಾಗ ಜನ ನನಗೆ `ಥೂ’ ಎಂದು ಬೈದಿದ್ದರು ಎಂದು ತಮಗಾದ ಅನುಭವವನ್ನು ವಿವರಿಸಿದ್ದಾರೆ.
ನನಗೋಸ್ಕರ ಅಲ್ಲದಿದ್ದರೂ ಜನರ ಒತ್ತಡವಂತೂ ಸಚಿವ ಸ್ಥಾನಕ್ಕಿದೆ. ಇದು ಎಂತಹ ನ್ಯಾಯ? ನೀವೇ ಹೇಳಿ. ದಲಿತನಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯಿಂದ ಏಳು ಚುನಾವಣೆಗಳಲ್ಲಿ ನಾನೊಬ್ಬನೇ ಗೆದ್ದು ಬಂದೆ. ಎಲ್ಲ ಮೇಲ್ವರ್ಗದ ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ ಎಂದು ಜಿಗಜಿಣಗಿ ಪ್ರಶ್ನಿಸಿರುವ ಅವರು, ಈ ವಿಚಾರದಲ್ಲಿ ನನ್ನ ಮನಸ್ಸಿಗೆ ತುಂಬಾ ನೋವಿದೆ ಎಂದಿದ್ದಾರೆ.
ವಾರದ ಹಿಂದಷ್ಟೇ ಅವರು ಬಿಜೆಪಿಯ ಕೆಲವು ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿತು ಎಂದು ಹೇಳಿದ್ದರು. ನಾನು ಸಚಿವನಾಗಬೇಕು ಎಂಬುದು ಉತ್ತರ ಕರ್ನಾಟಕದ ಜನರ ಮತ್ತು ನಮ್ಮ ಸಮಾಜದ ಜನರ ಬಯಕೆಯಾಗಿತ್ತು. ರಾಜ್ಯದ ನಾಯಕರು ಸಚಿವ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಅವರಿಗೆ ಆ ಜವಾಬ್ದಾರಿಯೂ ಇತ್ತು. ಆದರೆ ಯಾರೊಬ್ಬರೂ ನನ್ನ ಪರ ಮಾತನಾಡಲಿಲ್ಲ. ಈ ವಿಷಯದಲ್ಲಿ ರಾಜ್ಯ ನಾಯಕರು ತಪ್ಪು ಮಾಡಿದ್ದಾರೆ ಎಂದು ಅವರು ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿದ್ದರು.